ಮುಂಬೈ: ಸ್ವಯಂಘೋಷಿತ ವಿವಾದಿತ ದೇವ ಮಹಿಳೆ ರಾಧೆ ಮಾ ವಿರುದ್ಧ ವೇಶ್ಯಾವಾಟಿಕೆ ಆರೋಪದ ದೂರಿನ ತನಿಖೆಯ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ.
ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ರಾಧೆ ಮಾ ವಿರುದ್ಧ ನೀಡಿದ್ದ ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ವಕೀಲೆ ಪಲ್ಗುಣಿ ಬ್ರಹ್ಮಭಟ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿವಿಎಂ ಕಾನಡೆ ಹಾಗೂ ಫನ್ಸಾಲ್ಕರ್ ಜೋಶಿ ಅವರನ್ನೊಳಗೊಂಡ ಪೀಠ, ತನಿಖೆಯ ಕುರಿತು ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ಈ ಸಂಬಂಧ ರಾಧೆ ಮಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದ್ದೆ ಎಂದು ಪೊಲೀಸರು ಇಂದು ಕೋರ್ಟ್ಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೆಚ್ಚಿನ ಮಾಹಿತಿ ನೀಡಿದ್ದೇನೆ. ಆದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ‘ರಾಧೆ ಮಾ ಧರ್ಮದ ಹೆಸರಿನಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆ. ಯುವಕರು ಮತ್ತು ಯುವತಿಯರು ದೇವ ಮಹಿಳೆಗೆ ಆಕರ್ಷಿತರಾಗಿದ್ದು, ಆರ್ಶೀವಾದ ಪಡೆಯಲು ಬರುವವರನ್ನು ಬಲವಂತಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ’ ಪಲ್ಗುಣಿ ವಾದಿಸಿದರು.
ಇದೇ ವೇಳೆ, ರಾಧೆ ಮಾ ನಡೆಸುತ್ತಿರುವ ಚಾರಿಟೇಬಲ್ ಟ್ರಸ್ಟ್ ಸಹ ನೋಂದಣಿಯಾಗಿಲ್ಲ. ಆದರೂ ಕೋಟ್ಯಾಂತರ ರುಪಾಯಿ ಸಂಗ್ರಹಿಸಲಾಗುತ್ತಿದೆ ಎಂದು ವಕೀಲೆ ಆರೋಪಿಸದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್, ಎರಡು ವಾರಗಳಲ್ಲಿ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಸಂಪೂರ್ಣ ಅಫಿಡವಿಟ್ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಆರ್ಶೀಖಾನ್ ಎಂಬ ಮಾಡೆಲ್ ಹಾಗೂ ನಟಿ ರಾಧೆ ಮಾ ವಿರುದ್ಧ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ. ನನ್ನನ್ನು ವೇಶ್ಯಾವಾಟಿಕೆಗೆ ತಳ್ಳುವ ಯತ್ನ ಮಾಡಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಅಲ್ಲದೆ ಮತ್ತೊಬ್ಬ ನಟಿ ಹಾಗೂ ಹಿಂದಿ ಬಿಗ್ ಬಾಸ್ ಸ್ಪರ್ಧಿ ಡಾಲಿ ಬಿಂದ್ರಾ ಸಹ ರಾಧೆ ಮಾ ತಮ್ಮ ಸಹಚರರೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದರು ಎಂದು ದೂರು ನೀಡಿದ್ದರು.