ಮುಂಬೈ

ಮುಂಬೈ: ಮಾಂಸ ಮಾರಾಟ ನಿಷೇಧ ಎರಡು ದಿನಕ್ಕೆ ಇಳಿಕೆ; ನಿಷೇಧ ಕ್ರಮಕ್ಕೆ ನ್ಯಾಯಾಲಯ ತರಾಟೆ

Pinterest LinkedIn Tumblr

meatಮುಂಬೈ, ಸೆ.11: ಕೆಲವು ರಾಜಕೀಯ ಪಕ್ಷಗಳು, ನಾಗರಿಕರು ಮತ್ತು ಮಟನ್ ವ್ಯಾಪಾರಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಾಂಸ ಮಾರಾಟ ನಿಷೇಧದ ಅವಧಿಯನ್ನು ಶುಕ್ರವಾರ ಎರಡು ದಿನಗಳಿಗೆ ಇಳಿಸಲಾಗಿದೆ.
ಮುಂಬೈನಲ್ಲಿ ಮಾಂಸ ಮಾರಾಟ ನಿಷೇಧದ ಕ್ರಮವನ್ನು ಸ್ಥಳೀಯ ನ್ಯಾಯಾಲಯವೊಂದು ‘ಪ್ರತಿಗಾಮಿ’ ಎಂದು ಬಣ್ಣಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ.
ಮುಂಬೈ ಮಹಾನಗರ ಪಾಲಿಕೆಯು ಶುಕ್ರವಾರ ಜೈನರ ಉಪವಾಸ ವ್ರತದ ಅವಧಿಯಲ್ಲಿ ಮಾಂಸ ಮಾರಾಟದ ನಿಷೇಧ ಕ್ರಮವನ್ನು ಎರಡು ದಿನಕ್ಕೆ ಇಳಿಸುವ ನಿರ್ಧಾರವೊಂದನ್ನು ಕೈಗೊಂಡಿದೆ. ಶಿವಸೇನೆಯ ಪಾಲಿಕೆ ಸದಸ್ಯ ಟಿ.ವಿಶ್ವಾಸ್‌ರಾವ್ ಈ ಸಂಬಂಧವಾಗಿ ಪ್ರಸ್ತಾವನೆಯೊಂದನ್ನು ಪಾಲಿಕೆಯ ಆಯುಕ್ತ ಅಜೆಯ್ ಮೆಹ್ತಾ ಅವರಿಗೆ ಸಲ್ಲಿಸಿದ್ದಾರೆ.
ಮಾಂಸ ಮಾರಾಟ ನಿಷೇಧ ವಿಚಾರದಲ್ಲಿ ಅನವಶ್ಯಕ ರಾಜಕಾರಣ ಮಾಡಲಾಗುತ್ತಿದೆ ಎಂದು ಬಿಜೆಪಿ ದೂಷಿಸಿದೆ. ಶಿವಸೇನೆ ಸದಸ್ಯರ ಪ್ರಸ್ತಾವನೆಯ ವಿಚಾರದಲ್ಲಿ ವೌನ ವಹಿಸಿದೆ. ಜೊತೆಗೆ ಎರಡು ದಿನಗಳ ನಿಷೇಧ ಕ್ರಮವನ್ನು ಪಕ್ಷ ಬೆಂಬಲಿಸಲಿದೆ ಎಂದು ಹೇಳಿದೆ.
ಕೋರ್ಟ್ ಚಾಟಿ: ‘ಪ್ರಗತಿಪರ’ ನಿಲುವಿನ ಮುಂಬೈಯಲ್ಲಿ ನಿಷೇಧ ಕ್ರಮವನ್ನು ಕಟುವಾದ ಶಬ್ದಗಳಲ್ಲಿ ಸ್ಥಳೀಯ ನ್ಯಾಯಾಲಯವೊಂದು ಟೀಕಿಸಿದೆ. ‘ಮುಂಬೈಯಲ್ಲಿ ಪ್ರಗತಿಪರ ನೋಟವಿದೆ. ಇವೆಲ್ಲ ಪ್ರತಿಗಾಮಿ ಕ್ರಮಗಳಾಗಿವೆ. ಭಾವನೆಗಳ ಅಂಶವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಖರೀದಿ ಎಂಬುದು ಸ್ವತಂತ್ರ ಆಯ್ಕೆಯಾಗಿದೆ’ ಎಂದು ನ್ಯಾಯಾಲಯ ಹೇಳಿದೆ.
ನಾಲ್ಕು ದಿನಗಳ ನಿಷೇಧ ಕ್ರಮವನ್ನು ಮುಂಬೈನ ಮಟನ್ ವ್ಯಾಪಾರಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
1994ರಲ್ಲಿ ಅಂದಿನ ಕಾಂಗ್ರೆಸ್ ಸರಕಾರವು ಜೈನರ ಉಪವಾಸ ವ್ರತದ ಸಂದರ್ಭದಲ್ಲಿ ನಿಷೇಧ ಕ್ರಮವನ್ನು ಜಾರಿಗೊಳಿಸಿತ್ತು. ಹತ್ತು ವರ್ಷಗಳ ನಂತರ ಎರಡು ದಿನವಿದ್ದ ನಿಷೇಧ ಕ್ರಮವನ್ನು ನಾಲ್ಕು ದಿನಗಳಿಗೆ ವಿಸ್ತರಣೆ ಮಾಡಲಾಗಿತ್ತು. ಈ ದಿನದ ತನಕ ನಿಷೇಧ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿರಲಿಲ್ಲ ಎಂದು ಮಟನ್ ವ್ಯಾಪಾರಸ್ಥರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
‘ಈ ಎಲ್ಲ ವರ್ಷಗಳಲ್ಲಿ ನೀವು ಪ್ರಾಣಿ ವಧೆಯನ್ನು ಮಾತ್ರ ನಿಷೇಧಿಸಿದ್ದೀರಿ. ಆದರೆ, ಮಾರಾಟವನ್ನಲ್ಲ. ಕೊನೆ ಗಳಿಗೆಯಲ್ಲಿ ನೀವು ಈ ನಿರ್ಧಾರವನ್ನು ಹೇಗೆ ತೆಗೆದುಕೊಂಡಿದ್ದೀರಿ?’ ಎಂದು ನ್ಯಾಯಾಲಯವು ಮಹಾನಗರ ಪಾಲಿಕೆಯನ್ನು ಪ್ರಶ್ನಿಸಿತು.
ನಿಷೇಧ ಕ್ರಮದ ಹಿಂದಿನ ತರ್ಕದ ಕುರಿತಂತೆ ಮಹಾರಾಷ್ಟ್ರ ಸರಕಾರವು ನ್ಯಾಯಾಲಯದಿಂದ ಕೆಲವು ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು.
‘ಅಹಿಂಸೆಯ ಬಗ್ಗೆ ನೀವು ಮಾತನಾಡುವಾಗ, ಮೀನು, ಸಮುದ್ರ ಆಹಾರ ಮತ್ತು ಮೊಟ್ಟೆಯನ್ನು ಯಾಕೆ ನಿಷೇಧಿಸಿಲ್ಲ’ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
‘ನೀರಿನಿಂದ ಹೊರಗೆ ತೆಗೆದ ಕೂಡಲೇ ಮೀನು ಸಾಯುತ್ತದೆ. ಹೀಗಾಗಿ ಅಲ್ಲಿ ವಧೆಯ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಹಿರಿಯ ಸರಕಾರಿ ವಕೀಲ ಅನಿಲ್ ಸಿಂಗ್ ಹೇಳಿದರು. ಪ್ರಾಣಿವಧೆ ಇರಬಾರದು ಎಂಬುದಷ್ಟೇ ನಮ್ಮ ಭಾವನೆಯಾಗಿದೆ ಎಂದು ಅವರು ವಿವರಿಸಿದರು.
‘ಜಾಗತೀಕರಣದ ಹಿನ್ನೆಲೆಯಲ್ಲಿ ನಾವು ನಮ್ಮ ಧೋರಣೆಗಳನ್ನು ಬದಲಾಯಿಸಿಕೊಳ್ಳಬೇಕು’ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

‘ಪ್ರಗತಿಪರ’ ನಿಲುವಿನ ಮುಂಬೈಯಲ್ಲಿ ನಿಷೇಧ ಕ್ರಮವನ್ನು ಕಟುವಾದ ಶಬ್ದಗಳಲ್ಲಿ ಸ್ಥಳೀಯ ನ್ಯಾಯಾಲಯವೊಂದು ಟೀಕಿಸಿದೆ. ‘ಮುಂಬೈಯಲ್ಲಿ ಪ್ರಗತಿಪರ ನೋಟವಿದೆ. ಇವೆಲ್ಲ ಪ್ರತಿಗಾಮಿ ಕ್ರಮಗಳಾಗಿವೆ. ಭಾವನೆಗಳ ಅಂಶವನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಖರೀದಿ ಎಂಬುದು ಸ್ವತಂತ್ರ ಆಯ್ಕೆಯಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

Write A Comment