ಮುಂಬೈ (ಪಿಟಿಐ): ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದ್ರಾಣಿ ಮುಖರ್ಜಿಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಕಾರು ಚಾಲಕ ಶ್ಯಾಮ್ ರಾಯ್ ಅವರನ್ನು ಭಾನುವಾರ ಮುಂಬೈ ಪೊಲೀಸರು ರಾಯಗಡ ಜಿಲ್ಲೆಯ ಪೆನ್ ತಾಲೂಕು ಅರಣ್ಯ ಪ್ರದೇಶಕ್ಕೆ ಕರೆದೊಯ್ಯದ್ದು ವಿಚಾರಣೆ ನಡೆಸಿದರು.
ಪೆನ್ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಪೊಲೀಸರು ಶುಕ್ರವಾರ ವಶಪಡಿಸಿಕೊಂಡ ಶೀನಾ ಅಸ್ಥಿಪಂಜರ ಅವಶೇಷಗಳನ್ನು ಈಗಾಗಲೇ ಡಿಎನ್ಎ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈ ಸಾಕ್ಷ್ಯ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಇಂದ್ರಾಣಿ ಮುಖರ್ಜಿ ಮತ್ತು ಸಂಜೀವ್ ಖನ್ನಾ, ಒಬ್ಬರ ಮೇಲೊಬ್ಬರು ಆರೋಪ ಮಾಡಿದ್ದಾರೆ. ಶೀನಾಳ ಸೋದರ ಮಿಖಾಯಿಲ್ ಬೋರಾನನ್ನು ಹೋಟೆಲ್ವೊಂದರಲ್ಲಿ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.