ಮುಂಬಯಿ: ವರದಕ್ಷಿಣೆ ಕಿರುಕುಳ ಆರೋಪಗಳನ್ನು ಎದುರಿಸುತ್ತಿರುವ ಸ್ವಯಂ ಘೋಷಿತ ದೇವ ಮಹಿಳೆ ರಾಧೇ ಮಾ ವಿರುದ್ಧ ಈಗ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬರತೊಡಗಿವೆ. ತನ್ನ ಸತ್ಸಂಗದಲ್ಲಿ ಆಕೆ ಅಪರಿಚಿತರೊಂದಿಗೆ ಸೆಕ್ಸ್ ನಡೆಸುವಂತೆ ತನ್ನ ಭಕ್ತೆಯರಿಗೆ ಅಪ್ಪಣೆ ಕೊಡಿಸುತ್ತಾಳೆ ಎಂಬ ಆರೋಪ ಆಕೆಯ ಓರ್ವ ನಿಕಟ ಭಕ್ತೆಯಿಂದಲೇ ಕೇಳಿ ಬಂದಿದೆ.
ರಾಧೇ ಮಾ ಭಕ್ತೆಯರಲ್ಲಿ ಓರ್ವಳಾಗಿರುವ ಮುಂಬಯಿ ಬಾಲಿವುಡ್ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಡಾಲಿ ಬಿಂದ್ರಾ ಕೆಲವು ದಿನಗಳ ಹಿಂದೆ “ದೇವಿ ಮಾ ಅವರ ಸತ್ಸಂಗದಲ್ಲಿ ಅಶ್ಲೀಲ ಕ್ರಿಯೆಗಳು ನಡೆಯುತ್ತವೆ’ ಎಂದು ಆರೋಪಿಸಿದ್ದರು.
ಇದೀಗ ಆಕೆ ತನ್ನ ಆರೋಪಗಳ ಸರಮಾಲೆಯನ್ನು ಮುಂದುವರಿಸಿ, “ರಾಧೇ ಮಾ, ಅಪರಿಚಿತ ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ನನ್ನನ್ನು ಬಲವಂತ ಪಡಿಸಿ ನನಗೆ ಅತ್ಯಂತ ಮುಜುಗರ ಉಂಟುಮಾಡಿದ್ದಾಳೆ’ ಎಂದು ಹೇಳಿದ್ದಾರೆ.
“ರಾಧೇ ಮಾ ಸತ್ಸಂಗದ ವೇಳೆಯಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ನನ್ನನ್ನು ಬಲವಂತ ಪಡಿಸುತ್ತಿದ್ದಳು. ನನಗಂತೂ ಅದು ರೇಜಿಗೆ ಹುಟ್ಟಿಸಿ ತೀವ್ರ ಜುಗುಪ್ಸೆಗೆ ಕಾರಣವಾಗಿತ್ತು. ನಾನು ಆ ಸಂದರ್ಭದಲ್ಲಿ ಎಷ್ಟೊಂದು ತೀವ್ರವಾದ ಯಾತನೆಯನ್ನು ಅನುಭವಿಸಿದೆ ಎನ್ನುವುದನ್ನು ಶಬ್ದಗಳಲ್ಲಿ ಹೇಳಲಾರೆ…..
…..ಸತ್ಸಂಗದಲ್ಲಿದ್ದವರು ಬಾಲಿವುಡ್ ಐಟಂ ಸಾಂಗ್ – ಡ್ಯಾನ್ಸ್‌ಗೆ ಹೆಜ್ಜೆ ಹಾಕುತ್ತಿದ್ದರು. ಎಲ್ಲದಕ್ಕೂ ರಾಧೇ ಮಾ ಚಿತಾವಣೆ ನಡೆಯುತ್ತಿತ್ತು. ಹೆಚ್ಚಿನವರು ನಗ್ನರಾಗಿ ನರ್ತಿಸುತ್ತಿದ್ದರು. ಯಾರೋ ಕೆಲವರು ನನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದರು. ಅದಂತೂ ಅತ್ಯಂತ ಕೆಟ್ಟದಾಗಿತ್ತು. ದೈಹಿಕವಾಗಿ ಮಾನಸಿಕವಾಗಿ ನಾನು ತುಂಬಾ ವೇದನೆಗೆ ಗುರಿಯಾಗಿದ್ದೆ. ಈ ಘಟನೆ ನನ್ನೊಳಗಿನ ಎಲ್ಲ ದೈಹಿಕ, ಮಾನಸಿಕ ಶಕ್ತಿಯನ್ನು ಹ್ರಾಸಮಾಡಿಬಿಟ್ಟಿತ್ತು’ ಎಂದು ಡಾಲಿ ತನ್ನ ನರಕಯಾತನೆಯ ಅನುಭವವನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ.
ಡಾಲಿ ಹೇಳುವ ಪ್ರಕಾರ ಸತ್ಸಂಗದಲ್ಲಿ ರಾಧೇಮಾ ಹಿರಿಯ ಮಗ, ಸೊಸೆಯಂದಿರುವ ಎಲ್ಲರೂ ಲೈಂಗಿಕವಾಗಿ ಆವಾಹನೆಗೆ ಗುರಿಯಾದವರಂತೆ, ಮೈಮೇಲೆ ಬಂದವರಂತೆ, ವರ್ತಿಸುತ್ತಾರೆ. ಬಾಲಿವುಡ್ ಐಟಮ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ಲೈಂಗಿಕತೆಯ ಪರಮಾವಧಿಯನ್ನು ಅಲ್ಲಿ ಕಾಣಬಹುದಾಗಿದೆ.
ಈ ಆರೋಪಗಳ ಬಳಿಕ ಇದೀಗ ಡಾಲಿಗೆ ರಾಧೇ ಮಾ ಭಕ್ತರಿಂದ ಜೀವ ಬೆದರಿಕೆ ಬಂದಿದೆ. ತನಗೆ ರಕ್ಷಣೆ ನೀಡುವಂತೆ ಆಕೆ ಕೋರಿಕೊಂಡಿದ್ದಾಳೆ. ಇದೀಗ ಆಕೆ ಮುಂಬಯಿ ಪೊಲೀಸರಲ್ಲಿ ತನ್ನ ಪ್ರಮಾಣೀಕೃತ ಹೇಳಿಕೆಯನ್ನು ದಾಖಲಿಸಲಿದ್ದಾಳೆ.
-ಉದಯವಾಣಿ