ಮುಂಬೈ

ತಾಯಿಯೇ ಮಗಳನ್ನು ಕೊಂದಳೇ?

Pinterest LinkedIn Tumblr

indrani_mikhailಮುಂಬೈ, ಆ.27: ಕಳೆದ 2012ರ ಮೇಯಲ್ಲಿ ಮುಂಬೈಯಿಂದ 84 ಕಿ.ಮೀ. ದೂರದ ಕಾಡಿ ನಲ್ಲಿ ಯುವತಿಯೊಬ್ಬಳ ಸುಟ್ಟ ಶವವು ಪತ್ತೆಯಾಗಿತ್ತು. ಶೀನಾ ಬೋರಾ ಎಂಬ 22ರ ಹರೆಯದ ಆ ಯುವತಿಯನ್ನು ಮೂವರು ವ್ಯಕ್ತಿಗಳು ಉಸಿರುಗಟ್ಟಿಸಿ ಕೊಂದು, ಶವವನ್ನು ಸುಟ್ಟಿದ್ದರೆಂದು ಆರೋಪಿಸಲಾಗಿದೆ. ಆ ಮೂವರು ವ್ಯಕ್ತಿಗಳನ್ನೀಗ ಬಂಧಿಸಲಾಗಿದೆ. ಅವರಲ್ಲೊಬ್ಬಳು ಆಕೆಯ ತಾಯಿ, ಸ್ಟಾರ್ ಟಿವಿಯ ಮಾಜಿ ಸಿಇಒ ಪೀಟರ್ ಮುಖರ್ಜಿಯವರ ಪತ್ನಿ ಹಾಗೂ 9 ಎಕ್ಸ್ ಮಾಧ್ಯಮ ಜಾಲದ ಸಹ-ಸಂಸ್ಥಾಪಕಿ ಇಂದ್ರಾಣಿ ಮುಕರ್ಜಿ ಎಂಬಾಕೆ. ಇನ್ನೊಬ್ಬ ಇಂದ್ರಾಣಿಯ ಮಾಜಿ ಗಂಡ, ಶೀನಾಳ ಮಲತಂದೆ ಸಂದೀಪ್ ಖನ್ನಾ ಎಂಬಾತ. ಮೂರನೆಯವನು ಇಂದ್ರಾಣಿಯ ಚಾಲಕ.
ಇಂದ್ರಾಣಿಯ ಹಿಂದಿನ ವಿವಾಹದಲ್ಲಿ ಹುಟ್ಟಿದ್ದ ಮಗಳಾದ ಶೀನಾ ಬೋರಾ, 2012ರ ಎ.24ರಂದು ಈ ಮೂವರೊಂದಿಗೆ ಕಾರೊಂದರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಳು. ನಿನ್ನೆಯ ವರೆಗೆ, ಎಲ್ಲರೂ ಆಕೆ ಅಮೆರಿಕಕ್ಕೆ ಹೋಗಿದ್ದಾಳೆಂದೇ ಭಾವಿಸಿದ್ದರು.
ಶೀನಾಳನ್ನು 2012ರ ಎ.24ರಂದು ಕಾರಿನಲ್ಲಿ ಕೊಲ್ಲಲಾಗಿತ್ತು. ಶವವಿದ್ದ ಕಾರನ್ನು ಪೀಟರ್ ಮುಖರ್ಜಿಯ ಗ್ಯಾರೇಜ್‌ನಲ್ಲಿ ರಾತ್ರಿಯಿಡೀ ನಿಲ್ಲಿಸಲಾಗಿತ್ತೆನ್ನಲಾಗಿದೆಯೆಂದು ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ತಿಳಿಸಿದ್ದಾರೆ. ಮರುದಿನ ಅದೇ ಕಾರಿನಲ್ಲಿ ಶೀನಾಳ ಶವವನ್ನು ರಾಯಗಡಕ್ಕೆ ಒಯ್ಯಲಾ ಗಿತ್ತು. ಮೇ 23ರಂದು ಅವಳ ಸುಟ್ಟ ದೇಹವು ಅಲ್ಲೇ ಪತ್ತೆಯಾಗಿತ್ತು. ಅಂದು ಪೊಲೀಸರು ವಾರೀಸುದಾರರಿಲ್ಲದ ಶವ ಎಂದಿದ್ದರು. ಆದಾಗ್ಯೂ, ಅದರ ಡಿಎನ್‌ಎಯನ್ನು ಕಾದಿರಿಸಿದ್ದರೆಂದು ಮೂಲಗಳು ತಿಳಿಸಿವೆ.
ಪೀಟರ್ ಮುಖರ್ಜಿಯ ಹಿಂದಿನ ಪತ್ನಿಯಲ್ಲಿ ಹುಟ್ಟಿದ್ದ ಮಗ ರಾಹುಲ್ ಎಂಬಾತನೊಂದಿಗೆ ಶೀನಾಳ ಸಂಬಂಧ ಇಂದ್ರಾಣಿಯನ್ನು ಚಿಂತೆಗೀಡು ಮಾಡಿತ್ತೆಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಹಣದ ವಿವಾದವನ್ನು ಅವರು ತಳ್ಳಿ ಹಾಕಿಲ್ಲ.
ಮಾಹಿತಿದಾರನೊಬ್ಬನ ಸುಳಿವಿನಂತೆ, ಪೊಲೀಸರು ನಾಲ್ಕು ತಿಂಗಳುಗಳಿಂದ ಇಂದ್ರಾಣಿಯನ್ನು ಗೊತ್ತಾಗದಂತೆ ತನಿಖೆ ನಡೆಸುತ್ತಿದ್ದರು. ಆದರೆ, ಆಕೆಯ ಚಾಲಕ ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಸೆರೆ ಸಿಕ್ಕ ಬಳಿಕವೇ ಎಲ್ಲ ವಿಚಾರ ಬಹಿರಂಗವಾಯಿತು.
ಚಾಲಕನ ವಿಚಾರಣೆಯ ವೇಳೆ ಆತ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡನು. ಅವನು ತಮ್ಮನ್ನು ಶೀನಾಳ ಶವ ಎಸೆದಿದ್ದ ಸ್ಥಳಕ್ಕೆ ಕೊಂಡೊಯ್ದನು ಎಂದು ಇಂದ್ರಾಣಿಯ ವಿಚಾರಣೆಯನ್ನು ನಡೆಸಿರುವ ಮಾರಿಯಾ ತಿಳಿಸಿದ್ದಾರೆ. ನಿನ್ನೆ ರಾತ್ರಿ ಇಂದ್ರಾಣಿಯ ಬಂಧನವಾಗುವ ವರೆಗೆ ಪೀಟರ್ ಸಹಿತ ಅವರೆಲ್ಲ ಬಂಧು-ಮಿತ್ರರು, ಶೀನಾ ಆಕೆಯ ತಂಗಿಯೆಂದೇ ತಿಳಿದಿದ್ದರು. ತಾನು ಈ ಅಪರಾಧದ ಬಗ್ಗೆ ಮೂಕನಾಗಿದ್ದೇನೆ. ಶೀನಾ ತನ್ನ ಹೆಂಡತಿಯ ಮಗಳು, ತಂಗಿಯಲ್ಲವೆಂದು ತಿಳಿದು ಆಘಾತಗೊಂಡಿದ್ದೇನೆಂದು ಪೀಟರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ತನ್ನ ವಿವಾಹದ ಮಹತ್ತ್ವದ ಭಾಗಗಳ ಕುರಿತು ತನ್ನನ್ನು ಕತ್ತಲಲ್ಲಿರಿಸಲಾಗಿತ್ತೆಂದು ಭಾವಿಸುತ್ತೇನೆಂದು ಅವರು ಹೇಳಿದ್ದಾರೆ.

Write A Comment