ಮುಂಬೈ

ಶೀನಾ ಹತ್ಯೆ ಪ್ರಕರಣ: ಪೊಲೀಸರಿಂದ ಮತ್ತೆ ಪ್ರಿಯಕರ ರಾಹುಲ್ ಮುಖರ್ಜಿ ವಿಚಾರಣೆ

Pinterest LinkedIn Tumblr

Rahul-Mukerjea-Sheena-BoraAಮುಂಬೈ,ಆ.27: ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಸ್ಟಾರ್ ಇಂಡಿಯಾ ಸಮೂಹದ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪುತ್ರ ರಾಹುಲ್ ಮುಖರ್ಜಿಯನ್ನು ಮುಂಬೈ ಪೊಲೀಸರು ಇಂದು ಮತ್ತೊಮ್ಮೆ ತೀವ್ರ ವಿಚಾರಣೆಗೊಳಪಡಿಸಿದರು. ಮೃತಳೊಂದಿಗೆ ಸಂಬಂಧವಿಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣದ ಸಂಕೀರ್ಣ ಒಳಸುಳಿಗಳನ್ನು ಬಯಲಿಗೆಳೆಯಲು ಪೊಲೀಸರು ಬುಧವಾರ ರಾತ್ರಿಯೂ ರಾಹುಲ್‌ನ ವಿಚಾರಣೆ ನಡೆಸಿದ್ದರು. ತನ್ಮಧ್ಯೆ,ಶೀನಾ ಮತ್ತು ರಾಹುಲ್ ಸಂಬಂಧವನ್ನು ಪೀಟರ್ ಮತ್ತು ಅವರ ಪತ್ನಿ, ಸ್ವಂತ ಪುತ್ರಿಯ ಹತ್ಯೆಯ ಆರೋಪದಲ್ಲಿ ಬಂಧನದಲ್ಲಿರುವ ಇಂದ್ರಾಣಿ ಮುಖರ್ಜಿ ವಿರೋಧಿಸಿದ್ದರು ಎಂಬ ಅಂಶವು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇದೊಂದು ಮರ್ಯಾದಾ ಹತ್ಯೆಯಾಗಿರಬಹುದೆಂಬ ಶಂಕೆ ಹುಟ್ಟಿಕೊಂಡಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಶೀನಾ(24) 2011,ಜೂ.20 ರಿಂದ ಕೆಲಸ ಮಾಡುತ್ತಿದ್ದ ಮುಂಬೈ ಮೆಟ್ರೋದ ಅಧಿಕಾರಿಗಳನ್ನೂ ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದಾರೆ. 2012 ಎ.12 ರಂದು ಶೀನಾ ರಜೆ ಪಡೆದುಕೊಂಡಿದ್ದು, ಅದೇ ದಿನ ಆಕೆಯ ಹತ್ಯೆ ನಡೆದಿತ್ತು. ಶೀನಾ ರಜೆಯಲ್ಲಿದ್ದಾಗಲೇ ತನ್ನ ರಾಜೀನಾಮೆ ಪತ್ರವನ್ನು ರವಾನಿಸಿದ್ದಳು ಎಂದು ಮುಂಬೈ ಮೆಟ್ರೊ ಬುಧವಾರ ಹೇಳಿಕೆಯೊಂದಲ್ಲಿ ತಿಳಿಸಿತ್ತು. ಶೀನಾ ರಜೆಯಲ್ಲಿದ್ದ ದಿನವೇ ಕೊಲೆಯಾಗಿದ್ದು,ಆಕೆಯ ರಾಜೀನಾಮೆ ಪತ್ರ ಅಥವಾ ಇ-ಮೇಲ್ ಅನ್ನು ಬೇರೆ ಯಾರೋ ಕಳುಹಿಸಿದ್ದರು ಎನ್ನುವುದು ಅತ್ಯಂತ ಸ್ಪಷ್ಟವಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಪೀಟರ್ ಮೊದಲ ಪತ್ನಿಯ ಪುತ್ರನಾಗಿರುವ ರಾಹುಲ್ ಹಾಗೂ ಇಂದ್ರಾಣಿಯ ಮೊದಲ ಪತಿಯ ಪುತ್ರಿ ಶೀನಾ ಪರಸ್ಪರ ಭೇಟಿಯಾಗುತ್ತಿದ್ದರೆನ್ನಲಾದ ಬಾಂದ್ರಾ ಮತ್ತು ಖಾರ್‌ನಲ್ಲಿಯ ಎರಡು ಫ್ಲಾಟ್‌ಗಳಿಗೂ ಆತನನ್ನು ಪೊಲೀಸರು ಕರೆದೊಯ್ದಿದ್ದಾರೆ.
ತನ್ಮಧ್ಯೆ ಬುಧವಾರ ಕೋಲ್ಕತಾದಲ್ಲಿ ಬಂಧಿಸಲ್ಪಟ್ಟಿರುವ ಇಂದ್ರಾಣಿಯ ಮಾಜಿ ಪತಿ ಸಂಜೀವ ಖನ್ನಾನನ್ನು ಇಂದು ಇಲ್ಲಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

Write A Comment