ಮುಂಬೈ: ಶಿವಸೇನೆಯ ಮುಖ್ಯಸ್ಥ ದಿವಂಗತ ಭಾಳ್ ಠಾಕ್ರೆಯನ್ನು ಉಗ್ರನೆಂದು ಬಣ್ಣಿಸಿದೆ ತೆಹೆಲ್ಕಾ ಮ್ಯಾಗಜಿನ್ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ (ಎಂಎನ್‌ಎಸ್ )ಸದಸ್ಯರು ದೂರು ನೀಡಿದ್ದಾರೆ.
ಯಾರು ಅತೀ ದೊಡ್ಡ ಉಗ್ರ ಎಂಬ ಶೀರ್ಷಿಕೆ ಕೊಟ್ಟಿರುವ ಕವರ್ ಸ್ಟೋರಿಯಲ್ಲಿ ಠಾಕ್ರೆಯನ್ನು ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಭೂಗತ ದೊರೆ ದಾವೂದ್ ಇಬ್ರಾಹಿಂ, 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್, ಖಲಿಸ್ತಾನ್ ಉಗ್ರರ ನಾಯಕ ಜರ್ನೈಲ್ ಸಿಂಗ್ ಬಿಂದ್ರನ್‌ವಾಲಾ ಮೊದಲಾದವರ ಹೆಸರು ಇರುವ ಉಗ್ರರ ಪಟ್ಟಿಯಲ್ಲಿ ಠಾಕ್ರೆಯ ಹೆಸರನ್ನೂ ಸೇರಿಸಲಾಗಿದೆ.
ಮ್ಯಾಗಜಿನ್‌ನ ಕವರ್ ಪುಟದಲ್ಲಿ ಮೂವರು ಉಗ್ರರ ಫೋಟೋದೊಂದಿಗೆ ಠಾಕ್ರೆಯವರ ಫೋಟೋ ಕೂಡಾ ಇದೆ.
ತೆಹಲ್ಕಾ ಮ್ಯಾಗಜಿನ್ ವಿರುದ್ಧ ಎಂಎನ್‌ಎಸ್ ಸದಸ್ಯ ಬಾಲನಂದಗೋಣ್ಕರ್ ದೂರು ನೀಡಿದ್ದಾರೆ. ಠಾಕ್ರೆಯನ್ನು ಉಗ್ರನೆಂದು ಬಿಂಬಿಸಿದ ಮ್ಯಾಗಜಿನ್‌ಗೆ ಕೂಡಲೇ ತಡೆಯೊಡ್ಡಬೇಕು ಮತ್ತು ಸಂಪಾದಕ ಮ್ಯಾಥ್ಯೂ ಸ್ಯಾಮುವೆಲ್ ಅವರನ್ನು ಬಂಧಿಸಬೇಕೆಂದು ಎಂಎನ್‌ಎಸ್ ಒತ್ತಾಯಿಸಿದೆ.