ಮುಂಬೈ

ಲಾಭಾಂಶದಲ್ಲಿ ಸರಕಾರಕ್ಕೆ 66,000 ಕೋಟಿ ರೂ. ಪಾವತಿಸಲಿರುವ ಆರ್‌ಬಿಐ

Pinterest LinkedIn Tumblr

RBIಮುಂಬಯಿ: ಕಳೆದ 80 ವರ್ಷಗಳ ಇತಿಹಾಸದಲ್ಲಿ ಗರಿಷ್ಠ 66 ಸಾವಿರ ಕೋಟಿ ರೂ. ಮೊತ್ತದ ಲಾಭಾಂಶವನ್ನು ಕೇಂದ್ರ ಸರಕಾರಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಗುರುವಾರ ಪಾವತಿಸಿದೆ.

ಕಳೆದ ಬಾರಿಗೆ ಹೋಲಿಸಿದರೆ ಲಾಭಾಂಶ ಪಾವತಿಯ ಮೊತ್ತದಲ್ಲಿ ಶೇ.22ರಷ್ಟು ಏರಿಕೆಯಾಗಿರುವುದು ಇನ್ನೊಂದು ಮಹತ್ವದ ಬೆಳವಣಿಗೆಯಾಗಿದೆ.

ಮೂಲಾಂಕಗಳ ಆಧಾರದಲ್ಲಿ ನೋಡುವುದಾದರೆ ಕಳೆದ ಅನೇಕ ವರ್ಷಗಳಿಗೆ ಹೋಲಿಸಿದಾಗ ಸರಕಾರಕ್ಕೆ ಆರ್‌ಬಿಐ ಪಾವತಿಸಿದ ಮೊತ್ತದಲ್ಲಿ ನಾಲ್ಕುಪಟ್ಟು ಏರಿಕೆಯಾಗಿದೆ.

ಈ ಪಾವತಿಯು ಸರಕಾರದ ಆರ್ಥಿಕತೆಯನ್ನು ಕಾಯ್ದುಕೊಳ್ಳಲು, ಹಣಕಾಸಿನ ಕೊರತೆ ಗುರಿಗಳನ್ನು ಪೂರೈಸಲು, ಬಡ್ಡಿದರವನ್ನು ಕನಿಷ್ಠ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಲು ಹಾಗೂ ಸರಕಾರದ ಬಂಡವಾಳ ವೆಚ್ಚ ಲಭ್ಯವಾಗುವಂತೆ ಮಾಡಲು ಅನುಕೂಲ ಮಾಡಿಕೊಡಲಿದೆ ಎಂದು ಅರ್ಥಶಾಸ್ತ್ರಜ್ಞರು ಹಾಗೂ ಬಾಂಡ್‌ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಮಂದಗತಿಯಲ್ಲಿದ್ದ ಆರ್ಥಿಕತೆಯನ್ನು ಉದ್ದೀಪನಗೊಳಿಸಲು ಕೇಂದ್ರ ಸರಕಾರ ಕೈಗೊಂಡ ಕ್ರಮಗಳಿಗೆ ದೊರೆತಿರುವ ಫಲವನ್ನೂ ಈ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು, ದೇಶದ ಬ್ಯಾಂಕ್‌ಗಳಿಗೆಲ್ಲ ಬ್ಯಾಂಕರ್ ಆಗಿರುವ ಆರ್‌ಬಿಐಗೆ ಆದಾಯದ ಅನೇಕ ಮೂಲಗಳಿವೆ. ಆದಾಯದ ಮೂರು ಪ್ರಮುಖ ಮೂಲಗಳೆಂದರೆ ಸರಕಾರದ ಭಧ್ರತೆಗಳಲ್ಲಿ ಆರ್‌ಬಿಐ ಪಡೆಯುವ ಕೂಪನ್ ಹಿಡುವಳಿ, ದೇಶದ ಬ್ಯಾಂಕ್‌ಗಳು ಪಡೆದ ಸಾಲಗಳಿಂದ ಸಿಗುವ ಬಡ್ಡಿ, ಅಮೆರಿಕಾದ ಟ್ರೆಷರಿ ಬಿಲ್‌ನಂಥ ಸಾರ್ವಭೌಮ ಬಾಂಡ್‌ಗಳಿಂದ ಸಿಗುವ ಶೇರುಗಳ ಮೇಲೆ ಬಡ್ಡಿ. ಪ್ರತಿ ವರ್ಷ ಖರ್ಚು ಕಳೆದು ಸಿಗುವ ದೊಡ್ಡ ಮೊತ್ತ ಲಾಭವನ್ನು ಕೇಂದ್ರ ಸರಕಾರದ ಬೊಕ್ಕಸಕ್ಕೆ ವರ್ಗಾಯಿಸುವ ಕೆಲಸವನ್ನು ಆರ್‌ಬಿಐ ಮಾಡುತ್ತದೆ.

Write A Comment