ಮುಂಬಯಿ: ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ನನ್ನ ಆಸ್ತಿ, ದುಬಾರಿ ವಸ್ತ್ರ, ಮೇಕಪ್ ಬಗ್ಗೆ ಕಟ್ಟುಕತೆಗಳನ್ನು ಹೆಣೆಯಲಾಗುತ್ತಿದೆ ಎಂದು ವರದಕ್ಷಿಣೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ ದೂರಿದ್ದಾರೆ.
‘ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 8-10 ಲಕ್ಷ ರೂ.’ ಎಂದು ತಮ್ಮ ಆಸ್ತಿ ವಿವರ ನೀಡಿರುವ ರಾಧೆ ಮಾ, ಅವರ ಮೇಕಪ್, ದೇವಿಯಂಥ ಉಡುಗೆ ತೊಡುಗೆ ಬಗ್ಗೆಯೂ ವಿವರಣೆ ನೀಡಿದ್ದಾರೆ. ‘ಭಕ್ತರು ಯಾವ ವಸ್ತ್ರ ನೀಡುವರೋ ಅದನ್ನೇ ತೊಡುವೆ. ಅವರೇ ನನ್ನನ್ನು ಅಲಂಕರಿಸುತ್ತಾರೆ, ಅವರೇ ಮೇಕಪ್ ಮಾಡುತ್ತಾರೆ,’ಎಂದಿದ್ದಾರೆ.
ಸದ್ಯದ ವಿವಾದ ಕುರಿತು ಮಿನಿ ತ್ರಿಶೂಲ ಹಿಡಿದು ರಾಧೆ ಮಾ ನೀಡಿದ ಕೇವಲ 10 ನಿಮಿಷದ ಸಂದರ್ಶನದಲ್ಲಿ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಸಂದರ್ಶನದ ವೇಳೆ ಅರೆನಿದ್ರಾವಸ್ಥೆಯಲ್ಲಿದ್ದ ರಾಧೆ ಮಾ ಸುತ್ತ 7-8 ಅನುಯಾಯಿಗಳು ಇದ್ದರು ಎನ್ನಲಾಗಿದೆ.
ಸಂದರ್ಶಕರ ಪ್ರಶ್ನೆಯನ್ನು ರಾಧೆ ಮಾ ಕಿವಿಯಲ್ಲಿ ಗುಟ್ಟಾಗಿ ಹೇಳುತ್ತಿದ್ದ ಅವರ ಪರಮಭಕ್ತ ಗುಪ್ತಾ, ಕಿವಿಯಲ್ಲಿ ಅವರು ಪಿಸುಗುಟ್ಟಿತ್ತಿದ್ದ ಉತ್ತರವನ್ನು ಸಂದರ್ಶಕರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಹೀಗೇಕೆ ಎಂದು ಪ್ರಶ್ನಿಸಿದಾಗ, ‘ಗುರುಗಳು ಆಳವಾದ ಧ್ಯಾನದಲ್ಲಿದ್ದಾರೆ,’ ಎಂಬ ಉತ್ತರ ಲಭ್ಯವಾಗಿದೆ.
ಮುಂಬಯಿ ನಗರಾದ್ಯಂತ ದೊಡ್ಡ ಹೋರ್ಡಿಂಗ್ ಹಾಕುವ ಮೂಲಕ ರಾಧೆ ಮಾ ಅವರನ್ನು ಮನೆಮಾತಾಗಿಸಿದ ಕೀರ್ತಿ ಗ್ಲೋಬಲ್ ಅಡ್ವರ್ಟೈಸಿಂಗ್‌ನ ಗುಪ್ತಾ ಅವರಿಗೆ ಸಲ್ಲುತ್ತದೆ.
ಡಾಲಿ ಬಿಂದ್ರಾ ದೂರು:
ಈ ಮಧ್ಯೆ, ಜೀವಬೆದರಿಕೆ ಕರೆ ಸ್ವೀಕರಿಸಿರುವ ಬಾಲಿವುಡ್ ನಟಿ, ರಾಧೆ ಮಾ ಅವರ ಮಾಜಿ ಭಕ್ತೆ ಡಾಲಿ ಬಾಂದ್ರ, ಈ ಸಂಬಂಧ ಮಾಜಿ ಗುರುವಿನ ವಿರುದ್ಧ ದೂರು ದಾಖಲಿಸಿದ್ದಾರೆ. ‘ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಇದರ ಹಿಂದೆ ರಾಧೆ ಮಾ, ಎಂಎಂ ಗುಪ್ತಾ ಹಾಗೂ ಆಶ್ರಮದ ಅನುಯಾಯಿಗಳ ಕೈವಾಡ ಇದೆ. ಈ ಸಂಬಂಧ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸುವರು,’ ಎಂದು ಬಿಂದ್ರಾ ಹೇಳಿದ್ದಾರೆ.