ಮುಂಬಯಿ: ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ನಟ ಶಾರುಖ್ ಖಾನ್‌ಗೆ ವಿಧಿಸಿದ್ದ ಐದು ವರ್ಷಗಳ ನಿಷೇಧವನ್ನು ಭಾನುವಾರ ತೆರವುಗೊಳಿಸಲಾಗಿದೆ. ಮುಂಬೈ ಕ್ರಿಕೆಟ್ ಸಂಘಟನೆ (ಎಂಸಿಎ)ಯ ನಿರ್ವಾಹಕ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮೇ 2012ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಕೆಕೆಆರ್ ಜಯ ಗಳಿಸಿತ್ತು. ಆ ವೇಳೆಯೇ ಸೆಕ್ಯೂರಿಟ್ ಗಾರ್ಡ್ ಹಾಗೂ ಎಂಸಿಎ ಅಧಿಕಾರಿಗಳ ವಿರುದ್ಧ ಶಾರುಖ್ ಖಾನ್ ಹರಿಹಾಯ್ದಿದ್ದರು. ಈ ನಿಷೇಧ 2017ರವರೆಗೆ ಮುಂದುವರಿಯಬೇಕಿದ್ದು, ಸಂಘಟನೆಯ ಕೆಲವರು ವಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮೂರು ವರ್ಷಗಳ ಅವಧಿಯಲ್ಲಿ ಶಾರುಖ್ ಕ್ರೀಡಾಂಗಣ ಪ್ರವೇಶಿಸದೆ, ಎಂಸಿಎ ನಿರ್ಬಂಧಕ್ಕೆ ಬದ್ಧರಾಗಿದ್ದ ಹಿನ್ನೆಲೆಯಲ್ಲಿ ನಿಷೇಧವನ್ನು ತೆರವುಗೊಳಿಸಲಾಗಿದೆ.
ಕಳೆದ ವರ್ಷ ಬೆಂಗಳೂರಿನ ಬದಲು ಐಪಿಎಲ್ ಅಂತಿಮ ಪಂದ್ಯ ಮುಂಬಯಿಯಲ್ಲಿ ನಡೆಸಲು ಯತ್ನಿಸಿದಾಗ ಶಾರುಖ್‌ಗೆ ವಿಧಿಸಿದ್ದ ನಿಷೇಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಆದರದು, ಕೇವಲ ಆ ಪಂದ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ಶಾಶ್ವತವಾಗಿ ನಿಷೇಧವನ್ನು ತೆರವುಗೊಳಿಸಲಾಗಿದೆ.
ದೇಶದ ಪ್ರಸಿದ್ಧ ಕ್ರೀಡಾಂಗಣವೊಂದಕ್ಕೆ ಐಪಿಎಲ್ ತಂಡವೊಂದರ ಮಾಲೀಕ ಹಾಗೂ ಪ್ರಸಿದ್ಧ ನಟರೊಬ್ಬರಿಗೆ ಪ್ರವೇಶ ನಿಷೇಧಿಸಿದ್ದಕ್ಕೆ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ರಾಜೀನ್ ಶುಕ್ಲಾ ಅವರಿಗೆ ಅಸಮಾಧಾನವಿತ್ತು.