ಮುಂಬೈ

ಲಕ್ಷಾಂತರ ರೂ. ಸಂಬಳದ ಹುದ್ದೆ ತೊರೆದು ಶಾಲೆ ತೆರೆದವರ ಕಥೆ

Pinterest LinkedIn Tumblr

9868IIT-socialRಒಂದೆಡೆ ಐಐಟಿ ವಿದ್ಯಾರ್ಥಿಗಳು ಬಹು ರಾಷ್ಟ್ರೀಯ ಕಂಪನಿಗಳ ಕೋಟಿ ರೂ. ಸಂಬಳದ ಪ್ಯಾಕೇಜ್ ಪಡೆಯುತ್ತಿದ್ದರೆ ಮತ್ತೊಂದೆಡೆ ಈಗಾಗಲೇ ಬಹು ರಾಷ್ಟ್ರೀಯ ಕಂಪನಿಗಳ ಉತ್ತಮ ಸಂಬಳದ ಉದ್ಯೋಗದಲ್ಲಿದ್ದ ಕೆಲ ಯುವಕ, ಯುವತಿಯರು ತಮ್ಮ ಹುದ್ದೆ ತೊರೆದು ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸುತ್ತಿದ್ದಾರೆ.

ವಿದೇಶಗಳಲ್ಲಿನ ಉನ್ನತ ಹುದ್ದೆ ತೊರೆದು ಭಾರತಕ್ಕೆ ವಾಪಾಸ್ ಬಂದಿರುವ ಈ ಯುವ ಜನತೆ ಪೈಕಿ ಕೆಲವರು ಶಾಲೆ ಕಟ್ಟಲು ಮುಂದಾದರೆ ಮತ್ತೆ ಕೆಲವರು ಸಣ್ಣ ಮಟ್ಟದ ಉದ್ಯಮ ತೆರೆದು ಆ ಮೂಲಕ ಹಲವರಿಗೆ ನೆರವಾಗುತ್ತಿದ್ದಾರೆ. ಗಾಂಧಿ ಮಾರ್ಗವನ್ನು ಅನುಸರಿಸುತ್ತಿರುವ ಈ ಯುವ ಪಡೆ ಸರಳ ಜೀವನ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಮುಂಬೈ ಐಐಟಿಯಿಂದ 2010 ರಲ್ಲಿ ಪದವಿ ಪಡೆದು ಮೂರು ವರ್ಷಗಳ ಕಾಲ ಬಹುರಾಷ್ಟೀಯ ಕಂಪನಿಯೊಂದರಲ್ಲಿ ತಿಂಗಳಿಗೆ ನಾಲ್ಕು ಲಕ್ಷ ರೂ. ಸಂಬಳಕ್ಕೆ ಕೆಲಸ ಮಾಡಿದ್ದ ಪ್ರತ್ಯೂಷ್ ರಾಥೋರ್ ತಮ್ಮ ಹುದ್ದೆಗೆ ಈಗ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಅವರಿಗಿದ್ದ ಶಿಕ್ಷಕನಾಗಬೇಕೆಂಬ ಹಂಬಲ. ಈ ಕಾರಣಕ್ಕಾಗಿ ಶಾಲೆಯೊಂದನ್ನು ತೆರೆದಿರುವ ಪ್ರತ್ಯೂಷ್, ಈ ಶಾಲೆ ಅಮೀರ್ ಖಾನ್ ಅವರ ‘3 ಈಡಿಯೆಟ್ಸ್’ ಮಾದರಿಯಲ್ಲಿರಬೇಕೆಂಬ ಕನಸು ಕಂಡಿದ್ದಾರೆ.

ಲಕ್ಷಾಂತರ ರೂ. ಸಂಬಳದ ಹುದ್ದೆ ತೊರೆಯಲು ಪ್ರತ್ಯೂಷ್ ಮುಂದಾದ ವೇಳೆ ಅವರ ಸ್ನೇಹಿತರು ಈತನಿಗೇನು ಹುಚ್ಚೇ ಎಂಬಂತೆ ನೋಡಿದ್ದಾರೆ. ಪೋಷಕರು ಇವರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಧೃತಿಗೆಡದ ಪ್ರತ್ಯೂಷ್ ತಮ್ಮ ದುಡಿಮೆಯ ಹಣವನ್ನೆಲ್ಲಾ ತಾವು ಕಂಡ ಕನಸಿನ ಶಾಲೆಗಾಗಿ ಸುರಿಯುತ್ತಿದ್ದಾರೆ. ಅದನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ.

ಐಐಟಿ ಪದವಿ ಪಡೆದಿರುವ ಸಿದ್ದಾರ್ಥ ಷಾ ಎಂಬ ವಿದ್ಯಾರ್ಥಿ ಕ್ಯಾಂಪಸ್ ಸಂದರ್ಶನಗಳನ್ನೆಲ್ಲಾ ಧಿಕ್ಕರಿಸಿ ಗಾಂಧಿ ಮಾರ್ಗ ಹಿಡಿದಿದ್ದಾರೆ. ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ ಎಂದು ನಂಬಿಕೊಂಡಿರುವ ಸಿದ್ದಾರ್ಥ್, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕೆಂಬ ಕಾರಣಕ್ಕಾಗಿ ಪ್ರತಿ ನಿತ್ಯ ಖುದ್ದು ಸ್ಥಳೀಯ ಶಾಲೆಗಳಿಗೆ ತೆರಳಿ ಅಲ್ಲಿನ ಶಿಕ್ಷಕ-ಶಿಕ್ಷಕಿಯರಿಗೆ ಪಾಠ ಮಾಡುತ್ತಿದ್ದಾರೆ.

ಇನ್ನು ಸುಹಾನಿ ಮೋಹನ್ ವಾರ್ಷಿಕ 20 ಲಕ್ಷ ರೂ. ಉದ್ಯೋಗದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ಯಾನಿಟರಿ ನ್ಯಾಪ್ ಕಿನ್ ತಯಾರಿಸುವ ಪುಟ್ಟದೊಂದು ಕಾರ್ಖಾನೆ ಆರಂಭಿಸಿದ್ದಾರೆ. ಗ್ರಾಮೀಣ ಮಹಿಳೆಯರಿಗೆ ಅತ್ಯಂತ ಕಡಿಮೆ ದರದಲ್ಲಿ ಇದು ದೊರೆಯುವಂತಾಗಬೇಕೆಂಬ ಉದ್ದೇಶ ಹೊಂದಿರುವ ಸುಹಾನಿ ಮೋಹನ್ ಹಲ ಬಡ ಮಹಿಳೆಯರಿಗೆ ತಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಕೊಟ್ಟಿದ್ದಾರೆ. ಹೀಗೆ ಒಂದು ಕಡೆ ಕೋಟ್ಯಾಂತರ ರೂ. ಸಂಬಳದ ಉದ್ಯೋಗಕ್ಕಾಗಿ ಪೈಪೋಟಿ ನಡೆದಿದ್ದರೆ ಮತ್ತೊಂದೆಡೆ ಇರುವ ಉನ್ನತ ಹುದ್ದೆ ತೊರೆದು ಸಮಾಜಮುಖಿ ಕೆಲಸದತ್ತ ಹಲವರು ಗಮನ ಹರಿಸಿದ್ದಾರೆ.

Write A Comment