ಮುಂಬೈ

42 ವರ್ಷ ಕಾಲ ಕೋಮಾದಲ್ಲಿದ್ದ ಅತ್ಯಾಚಾರ ಸಂತ್ರಸ್ತೆ ಅರುಣ ಶಾನಭಾಗ್ ಸಾವು

Pinterest LinkedIn Tumblr

Aruna-Shanbhag

ಮುಂಬೈ, ಮೇ 18: ಬರೋಬ್ಬರಿ 42 ವರ್ಷಗಳ ದಾರುಣ ಬದುಕು ಸವೆಸಿದ ಅತ್ಯಾಚಾರ ಸಂತ್ರಸ್ತೆ, ನರ್ಸ್ ಅರುಣಾ ಶಾನಭಾಗ್ ಅವರ ನರಕ ಸದೃಶವಾಗಿ ನರಳಿದ ಜೀವಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ಇಲ್ಲಿನ ಕೆಇಎಂ ಆಸ್ಪತ್ರೆಯಲ್ಲಿ ಕಳೆದ 42 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಅರುಣಾ ಶಾನಭಾಗ್ ಇಂದು ಇಹ ಲೋಕದ ಬದುಕಿಗೆ ವಿದಾಯ ಹೇಳಿದ್ದಾರೆ.

ಇವರು ಈ ಹಿಂದೆ ಸಲ್ಲಿಸಿದ್ದ ದಯಾಮರಣ ಮನವಿ ಅರ್ಜಿ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ನ್ಯಾಯಾಲಯ ದಯಾಮರಣ ನಿರಾಕರಿಸಿತ್ತು. ಘಟನೆ ಹಿನ್ನೆಲೆ: ಉತ್ತರ ಕನ್ನಡ ಮೂಲದ ಅರುಣಾ ಶಾನಭಾಗ್. ಇದೇ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಅದೊಂದು ದುರ್ದಿನ 1973ರ 27ರ ರಾತ್ರಿ , ಕರ್ತವ್ಯದಲ್ಲಿದ್ದ ಅರುಣಾ ಮೇಲೆ ಅದೇ ಆಸ್ಪತ್ರೆಯ ಸಿಬ್ಬಂದಿ ಸೋನ್ ಲಾಲ್ ಎಂಬ ದುಷ್ಕರ್ಮಿ ಪೈಶಾಚಿಕವಾಗಿ ಅತ್ಯಾಚಾರ ಎಸಗಿ ನಂತರ ಮರಣಾಂತಿಕ ಹಲ್ಲೆಯನ್ನು ಮಾಡಿದ್ದ.

ಆದರೆ ಅರುಣಾ ಸಾಯಲಿಲ್ಲ. ಬದುಕುಳಿದಳು. ಆದರೆ, ಅಂದು ಕೋಮಾಕ್ಕೆ ಜಾರಿದ್ದ ಅರುಣಾ ಮತ್ತೆ ಎಚ್ಚರಗೊಳ್ಳಲೇ ಇಲ್ಲ. 42 ವರ್ಷಗಳ ಸುದೀರ್ಘ ಕಾಲವನ್ನು ಅರುಣಾ ಕೋಮಾದಲ್ಲೇ ಕಳೆದಿದ್ದಳು. ಅನೇಕ ಕನಸುಗಳೊಂದಿಗೆ ನರ್ಸ್ ಆಗಿ ಜೀವನ ಆರಂಭಿಸಿದ್ದ ಅರುಣಾ ಸೋನಾಲಾಲ್ ಎಂಬ ನೀಚನ ದಿಸೆಯಿಂದಾಗಿ 42 ವರ್ಷಗಳ ಕಾಲ ಜೀವಚ್ಛವವಾಗಿ ನರಳಿ, ನರಳಿ ಅಂತೂ ಇಂದು ಇಹದ ವ್ಯಾಪಾರ ಮುಗಿಸುವ ಮೂಲಕ ನೆಮ್ಮದಿ ಕಂಡದ್ದು ದುರಂತವೇ ಸರಿ.

Write A Comment