ಮುಂಬೈ

‘ಶ್ರೀಮಂತ ವಿಚ್ಛೇದಿತೆ ಜೀವನಾಂಶಕ್ಕೆ ಅರ್ಹರಲ್ಲ’: ಬಾಂಬೆ ಹೈಕೋರ್ಟ್‌ ಆದೇಶ

Pinterest LinkedIn Tumblr

Bombay-High-Court-111

ಮುಂಬೈ (ಏಜೆನ್ಸೀಸ್‌): ಶ್ರೀಮಂತ ಹಾಗೂ ಸ್ವಾವಲಂಬಿಯಾಗಿರುವ ವಿಚ್ಛೇದಿತ ಮಹಿಳೆಯು ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹರಲ್ಲ ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿದೆ.

ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ಜೀವನಾಂಶಕ್ಕಿಂತ ಹೆಚ್ಚಿನ ಜೀವನಾಂಶ ಕೊಡಿಸುವಂತೆ ಕೋರಿ ಮುಂಬೈನ ನಾರಿಮನ್‌ ಪಾಯಿಂಟ್‌ನ ನಿವಾಸಿ, 47 ವರ್ಷದ ಮಹಿಳೆ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಮೆನನ್‌ ಮತ್ತು ಎ.ಎಸ್‌.ಓಕಾ ಅವರನ್ನೊಳಗೊಂಡ ನ್ಯಾಯಪೀಠವು ವಿಚ್ಛೇದಿತ ಮಹಿಳೆ ಸಾಕಷ್ಟು ಆಸ್ತಿ ಹೊಂದಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದರೆ ಅವರು ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹರಲ್ಲ ಎಂದು ಅಭಿಪ್ರಾಯಪಟ್ಟಿದೆ.

ದಕ್ಷಿಣ ಮುಂಬೈನ ನಿವಾಸಿಗಳಾಗಿದ್ದ ದಂಪತಿಗೆ ಬಾಂದ್ರಾದ ಕೌಟುಂಬಿಕ ನ್ಯಾಯಾಲಯ 2002ರಲ್ಲಿ ವಿಚ್ಛೇದನ ನೀಡಿತ್ತು. ಪ್ರತಿ ತಿಂಗಳು ಪತ್ನಿಗೆ ₹ 25 ಸಾವಿರ ಜೀವನಾಂಶ ಮತ್ತು ಮಗಳ ಜೀವನ ನಿರ್ವಹಣೆಗೆ ₹ 25 ಸಾವಿರ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು.

ಮಾಜಿ ಪತಿ ‘ಅತ್ಯಂತ ಶ್ರೀಮಂತ’ನಾಗಿದ್ದು, ಆತನಿಂದ ಪ್ರತಿ ತಿಂಗಳು ಕನಿಷ್ಠ ₹ 75 ಸಾವಿರ ಜೀವನಾಂಶ ಕೊಡಿಸುವಂತೆ ಕೋರಿ ಆ ಮಹಿಳೆ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಮಹಿಳೆ ಸಿಂಗಪುರದ ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕಿ ಎಂಬ ವಿಷಯ ಗಮನಕ್ಕೆ ಬಂದಿದೆ. ಮಹಿಳೆ ಈ ಹಿಂದಿನಂತಯೇ ಸಿರಿವಂತಿಕೆಯ ಜೀವನ ನಡೆಸುತ್ತಿದ್ದು, ಸ್ವಾವಲಂಬಿಯಾಗಿದ್ದಾರೆ. ಹೀಗಾಗಿ ಅವರಿಗೆ ಜೀವನಾಂಶ  ಕೇಳುವ ‘ಅರ್ಹತೆ’ ಇಲ್ಲ ಎಂದು ನ್ಯಾಯಪೀಠ ಹೇಳಿದೆ.

ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಮಧ್ಯ ಪ್ರವೇಶಿಸದಿರಲು ನ್ಯಾಯಪೀಠ ನಿರ್ಧರಿಸಿದೆ.

Write A Comment