ಮುಂಬೈ

ವಿರೋಧ ಪಕ್ಷದ ಆಸನಗಳಲ್ಲಿ ಶಿವಸೇನೆ: ಉದ್ಧವ್ ಠಾಕ್ರೆ ಜೊತೆ ಶಿವಸೇನಾ ನಾಯಕರು

Pinterest LinkedIn Tumblr

Shiv-Sena2PTI

ಮುಂಬೈ: ಇಂದು ಪ್ರಾರಂಭವಾದ ಮೂರು ದಿನದ ಮಹಾರಾಷ್ಟ್ರ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಶಿವಸೇನೆಯ ಶಾಸಕರು ವಿರೋಧಪಕ್ಷದ ಆಸನಗಳಲ್ಲಿ ಆಸೀನರಾಗಿದ್ದಾರೆ. ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯಪಾಲರ ಸೂಚನೆಯಂತೆ ಸರ್ಕಾರದ ಬಹುಮತ ಸಾಬೀತುಪಡಿಸಲಿದ್ದಾರೆ.

ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆಯ ಶಾಸಕರು ಕೇಸರಿ ಫೇಟ ತೊಟ್ಟು ಗುಂಪಾಗಿ ಬಂದು ೨೮೮ ಸದಸ್ಯರ ವಿಧಾನಸಭೆಯಲ್ಲಿ ವಿರೋಧಪಕ್ಷದ ಆಸನಗಳಲ್ಲಿ ಕುಳಿತುಕೊಂಡರು.

ಬೆಳಗ್ಗೆ ೧೧ ಘಂಟೆಗೆ ಪ್ರಾರಂಭವಾದ ಅಧಿವೇಶನಕ್ಕೂ ಮುಂಚೆ, ರಾಜಭವನದಲ್ಲಿ ಹಿರಿಯ ಶಾಸಕ ಜೀವ ಪಾಂಡು ಗಾವಿಟ್ ಅವರಿಗೆ ಹಂಗಾಮಿ ಸಭಾಧ್ಯಕ್ಷರಾಗಿ, ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಪ್ರಮಾಣವಚನ ಬೋಧಿಸಿದರು.

ನಂತರ ಗಾವಿಟ್ ಅವರು, ವಿಧಾನಸಭೆಯಲ್ಲಿ ಆಯ್ಕೆಯಾದ ಹೊಸ ಸದಸ್ಯರ ಪ್ರಮಾಣವಚನವನ್ನು ನಿರ್ದೇಶಿಸಿದರು. ಇದು ನಾಳೆಯವರೆಗೂ ಮುಂದುವರೆಯಲಿದ್ದು, ನವೆಂಬರ್ ೧೨ ರಂದು ಅಂದರೆ ಅಧಿವೇಶನದ ಕೊನೆಯ ದಿನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಶಿವಸೇನೆ ಪಕ್ಷದ ಮೂಲಗಳ ಪ್ರಕಾರ ಸಭಾದ್ಯಕ್ಷರ ಸ್ಥಾನಕ್ಕೆ ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ.

ಸದ್ಯಕ್ಕೆ ಬಿಜೆಪಿ ಜೊತೆ ಯಾವುದೂ ಮಾತುಕತೆ ನಡೆಸುತ್ತಿಲ್ಲ ಎಂದು ಸೇನೆಯ ನಾಯಕ ನೀಲಂ ಗೋರ್ಖೆ ತಿಳಿಸಿದ್ದಾರೆ.

ಬಿಜೆಪಿ ಬಹುಮತ ಸಾಬೀತುಪಡಿಸಲು ಎನ್ ಸಿ ಪಿ ಯ ಬೆಂಬಲ ತೆಗೆದುಕೊಂಡರೆ ಶಿವಸೇನೆ ವಿರೋಧಪಕ್ಷವಾಗಿ ಉಳಿಯುವುದು ಎಂದು ಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ನೆನ್ನೆ ಗುಡುಗಿದ್ದರು.

ಉದ್ಧವ್ ಠಾಕ್ರೆ ಬಿಜೆಪಿಗೆ ತನ್ನ ಅಂತಿಮ ನಿರ್ಣಯ ತಿಳಿಸಲು  ೨ ದಿನಗಳ ಕಾಲಾವಕಾಶದ ಗಡವು ನೀಡಿದ್ದಾರೆ.

ಮರಾಠಿ ಮಾಧ್ಯಮ ಶಾಲೆಗಳಲ್ಲಿ ಉರ್ದು ಭಾಷಾ ಕಲಿಕೆಯ ಆಯ್ಕೆ ನೀಡಲಾಗುವುದು ಎಂದಿರುವ ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರಿಗೆ ಶಿವಸೇನೆ ಶಾಸಕರು ಹಸಿರು ಟೋಪಿಯನ್ನು ಉಡುಗೊರೆಯಾಗಿ ನೀಡುತ್ತೇವೆ ಎಂದು ಸೇನೆಯ ಹಿರಿಯ ಮುಖಂಡ ದಿವಾಕರ್ ರಾವತ್ ತಿಳಿಸಿದ್ದಾರೆ.

ಈ ಹಿಂದೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಮುಖ್ಯಮಂತಿ ಪೃಥ್ವಿರಾಜ್ ಚೌಹಾನ್ ಮತ್ತು ಮಾಜಿ ಶಿಕ್ಷಣ ಸಚಿವ ವಿನೋದ್ ಟಾವ್ದೆ ಅವರಿಗೆ ವಿಧಾನಸಭಾ ಶಾಸಕರಾಗಿ ಮೊದಲ ದಿನ.

ಕೆಲವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಹಲವು ಶಾಸಕರು ಜೈ ವಿದರ್ಭ ಎಂದು ಘೋಷಣೆ ಕೂಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಕೆಲವು ಸದಸ್ಯರು ಪ್ರಮಾಣ ವಚನದ ವೇಳೆ ನಮೋ ಎಂದರು.

Write A Comment