ಕರ್ನಾಟಕ

ವಿಡಿಯೋ ಕಾಲ್ ಮೂಲಕ ಹೆರಿಗೆ!

Pinterest LinkedIn Tumblr


ಬೆಂಗಳೂರು (ಜು. 28): ‘ಹೆಣ್ಮಕ್ಕಳೇ ಸ್ಟ್ರಾಂಗ್ ಗುರು’ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ತುಂಬು ಗರ್ಭಿಣಿಗೆ ವಾಟ್ಸಾಪ್ ವಿಡಿಯೋ ಕಾಲ್ ನಿಂದ ಸಹಜ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ಅಪರೂಪದ, ಮೈ ನವಿರೇಳಿಸುವ ಘಟನೆಗೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಮಹಿಳೆಯರು ಮಾಡಿದ ಸಾಹಸ ಸಾಕ್ಷಿಯಾಗಿದೆ.

ನಿಮ್ಮಲ್ಲಿ ಬಹುತೇಕರು ತ್ರೀ ಈಡಿಯಟ್ಸ್​ ಸಿನಿಮಾ ನೋಡಿರಬಹುದು. ಆ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸುವ ಆ ಸೀನ್ ಯಾರೂ ಮರೆಯಲು ಸಾಧ್ಯವಿಲ್ಲ. ಅದೇ ಘಟನೆ ಹಾವೇರಿಯಲ್ಲಿ ಮರುಕಳಿಸಿದೆ. ಆ ಸಿನಿಮಾದಲ್ಲಿ ವೈದ್ಯೆಯ ಪಾತ್ರ ಮಾಡಿರುವ ನಾಯಕಿ ಕರೀನಾ ಕಪೂರ್ ಅಕ್ಕನಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಆಂಬುಲೆನ್ಸ್ ಬರುವುದು ಮತ್ತು ಆಸ್ಪತ್ರೆ ತಲುಪುವುದು ಅಸಾಧ್ಯವಾಗುತ್ತದೆ. ಆಗ ಚಿತ್ರದ ನಾಯಕ ಆಮೀರ್ ಖಾನ್ ಗೆ ವಿಡಿಯೋ ಕಾಲ್ ಮೂಲಕವೇ ಹೆರಿಗೆ ಮಾಡುವ ವಿಧಾನಗಳನ್ನು ನಾಯಕಿ ತಿಳಿಸಿಕೊಡುತ್ತಾರೆ. ಅದರಂತೆ ಆತ ಯಶಸ್ವಿಯಾಗಿ ಹೆರಿಗೆ ಮಾಡಿಸುತ್ತಾನೆ.

ಇದೇ ರೀತಿಯ ಘಟನೆ ಹಾವೇರಿಯ ಕಿತ್ತೂರು ಚನ್ನಮ್ಮ ರಸ್ತೆಯ ವೈದ್ಯರ ಓಣಿಯಲ್ಲಿ ನಡೆದಿದೆ. ಇಲ್ಲಿನ ವಾಸವಿ ಪತ್ತೆಪೂರ ಎಂಬ ಗರ್ಭಿಣಿಗೆ ಭಾನುವಾರದ ಲಾಕ್ ಡೌನ್ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಷ್ಟೊತ್ತಿಗಾಲೇ ಮಗು ಗರ್ಭಿಣಿಯ ಹೊಟ್ಟೆಯಿಂದ ಮಗು ಅರ್ಧಭಾಗ ಹೊರ ಬಂದು ಕಣ್ಣುತೆರೆದಿತ್ತು. ಆ ಸಂದರ್ಭದಲ್ಲಿ ಎಷ್ಟೇ ಪ್ರಯತ್ನಿಸಿದರೂ ವೈದ್ಯರು ಮತ್ತು ಆಂಬ್ಯುಲೆನ್ಸ್ ಸಿಗದೆ ಹೋದಾಗ ಅಕ್ಕ ಪಕ್ಕದ ಮಹಿಳೆಯರೇ ಸೇರಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.

ಹೌದು, ಬೆಂಗಳೂರಿನಲ್ಲಿ ನೆಲೆಸಿರುವ, ವೃತ್ತಿಯಲ್ಲಿ ಎಸಿಎ ಆಗಿರೋ ಅಂಕಿತಾ, ಇಂಜಿನಿಯರ್ ಆಗಿರುವ ಜ್ಯೋತಿ ಲಾಕ್​ಡೌನ್ ಹಿನ್ನೆಲೆ ಹಾವೇರಿಗೆ ಬಂದಿದ್ದರು. ಇವರ ಜೊತೆಗೆ ವಕೀಲೆಯಾಗಿರೋ ಮಧುಲಿಕಾ ದೇಸಾಯಿ ಮತ್ತು ಇತರೆ ಮಹಿಳೆಯರು ಈ ಹೆರಿಗೆ ಮಾಡಿಸಿದ್ದಾರೆ. ಹೇಗೆ ಹೆರಿಗೆ ಮಾಡಿದರು ಎಂಬ ಕುತೂಹಲಕ್ಕೆ ಇಲ್ಲಿ ಉತ್ತರವಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವೈದ್ಯೆಯಾಗಿರುವ ಹಾವೇರಿಯ ಡಾ. ಪ್ರಿಯಾಂಕಾ ಮಂತಗಿ, ಇಂಜಿನಿಯರ್ ಆಗಿರುವ ಅಂಕಿತಾ ಇಬ್ಬರೂ ಸ್ನೇಹಿತೆಯರು. ಹೀಗಾಗಿ, ಅಂಕಿತಾ ತನ್ನ ಸ್ನೇಹಿತೆ ಡಾ. ಪ್ರಿಯಾಂಕಾಗೆ ಫೋನ್ ಮಾಡಿ ಪರಿಸ್ಥಿತಿ ವಿವರಿಸಿದಾಗ, ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ವೈದ್ಯೆ ಅಗತ್ಯ ಮಾರ್ಗದರ್ಶನ ಮತ್ತು ಸಲಹೆ ನೀಡಿದ್ದಾರೆ.

ಅದರಂತೆ ಈಮಹಿಳೆಯರೆಲ್ಲರೂ ಸೇರಿ ಸಹಜ ಹೆರಿಗೆ ಮಾಡಿಸಿದ್ದು, ಸದ್ಯ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಒಟ್ಟಿನಲ್ಲಿ ಮಹಿಳೆಯರು ಹಾಗೂ ವೈದ್ಯೆಯ ಸಮಯ ಪ್ರಜ್ಞೆ, ಸಾಹಸ, ದಿಟ್ಟತನ ಹಾಗೂ ಮಾನವೀಯತೆ ಎರಡು ಜೀವಗಳನ್ನು ಉಳಿಸಿದೆ. ಈ ಅಪರೂಪದ ಘಟನೆಯಿಂದ ಗರ್ಭಿಣಿಯ ಇಡೀ ಕುಟುಂಬ ಮತ್ತು ಓಣಿಯ ಜನರು ಸಂಭ್ರಮಿಸಿದ್ದಾರೆ.

Comments are closed.