ಕರ್ನಾಟಕ

ಬಾಗಲಕೋಟೆ ಕ್ವಾರಂಟೈನ್ ಸೆಂಟರ್ ನಲ್ಲಿ ನೀಡುವ ಪಲಾವ್ ಮತ್ತು ಸಾಂಬಾರ್​ನಲ್ಲಿ ಹುಳುಗಳು ಪತ್ತೆ

Pinterest LinkedIn Tumblr


ಬಾಗಲಕೋಟೆ: ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾಗಿ ಸೌಲಭ್ಯ ಸಿಗುತ್ತಿಲ್ಲ ಎನ್ನುವ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ. ಬಾಗಲಕೋಟೆ ನವನಗರದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಪಲಾವ್ ಮತ್ತು ಸಾಂಬಾರ್​ನಲ್ಲಿ ಹುಳು, ಹುಪ್ಪಡಿ ಪತ್ತೆಯಾಗಿವೆ. ಇಲ್ಲಿ ಗುಣಮಟ್ಟದ ಆಹಾರ ಕೊಡುತ್ತಿಲ್ಲವೆಂದು ಕ್ವಾರಂಟೈನ್ ಕೇಂದ್ರದಲ್ಲಿರುವ ಜನರು ಆರೋಪಿಸಿದ್ದಾರೆ.

ಬಾಗಲಕೋಟೆ ನವನಗರದ ಸೆಕ್ಟರ್ 46ದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಈ ಅವ್ಯವಸ್ಥೆ ಆಗಿರುವುದು ಕಂಡುಬಂದಿದೆ. ಇಲ್ಲಿ ಕಲಾದಗಿ ಗ್ರಾಮದವರು ಸೇರಿ ವಿವಿಧೆಡೆ 350ಕ್ಕೂ ಹೆಚ್ಚು ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಬಾಗಲಕೋಟೆ ನಗರದಲ್ಲಿ 8 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿದ್ದು 1,200 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.

ತಾಲೂಕಾಡಳಿತ, ಜಿಲ್ಲಾಡಳಿತ ಸರಿಯಾಗಿ ಸೌಲಭ್ಯ ನೀಡುತ್ತಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ನೀಡಲಾದ ಪಲಾವ್, ಸಾಂಬಾರ್​ನಲ್ಲಿ ಹುಳು ಹುಪ್ಪಡಿಯಿರುವ ಫೋಟೋ, ವಿಡಿಯೋವನ್ನ ನ್ಯೂಸ್18ಗೆ ನೀಡಿ ಕ್ವಾರಂಟೈನ್​ನಲ್ಲಿನ ಜನ ಅಳಲು ತೋಡಿಕೊಂಡಿದ್ದಾರೆ‌‌. ಶೌಚಾಲಯ, ಸ್ನಾನಗೃಹ ಸರಿಯಾಗಿಲ್ಲ. ಮಕ್ಕಳು, ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಜನರು ತಂದಿದ್ದಾರೆ. ಕ್ವಾರಂಟೈನ್ ಕೇಂದ್ರಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ, ಬಾಗಲಕೋಟೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿ ಗುಣಮಟ್ಟದ ಆಹಾರ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆನ್ನಲಾಗಿದೆ.

ಕ್ವಾರಂಟೈನ್ ಕೇಂದ್ರದಲ್ಲಿ ಗುಣಮಟ್ಟದ ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರಕ್ಕೆ ಎಸಿ ಮತ್ತು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ನ್ಯೂಸ್ 18 ಗೆ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಬಾಗಲಕೋಟೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆ ಆಗರವಾಗಿದ್ದು, ಅಧಿಕಾರಿಗಳು, ಅಡುಗೆ ಸಿಬ್ಬಂದಿಯವರು ಗುಣಮಟ್ಟದ ಆಹಾರ ಹಾಗೂ ಸೂಕ್ತ ಸೌಲಭ್ಯ ಒದಗಿಸಿಕೊಡಬೇಕಿದೆ.

Comments are closed.