ಬೆಂಗಳೂರು: ಕಳಪೆ ಗುಣಮಟ್ಟದ ಪಿಪಿಇ ಕಿಟ್ಸ್ ನೀಡಲಾಗಿದೆ ಎಂದು ದೂರಿದ್ದ ನಗರ ಕಿಮ್ಸ್ ಆಸ್ಪತ್ರೆಯ ವೈದ್ಯೆಗೆ ಇದೀಗ ಕೊರೋನಾ ಪಾಸಿಟಿವ್ ಬಂದಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಹಿಂದೆ ಆಸ್ಪತ್ರೆಯಲ್ಲಿ ನೀಡಲಾಗಿರುವ ಪಿಪಿಇ ಕಿಟ್ಸ್ ಗಳು ಕಳಪೆ ಗುಣಮಟ್ಟದ್ದಾಗಿದ್ದು, ಎನ್95 ಮಾಸ್ಕ್ ಗಳ ಕೊರತೆ ಎದುರಾಗಿದೆ ಎಂದು ವೈದ್ಯೆಯೊಬ್ಬರು ಆರೋಪಿಸಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿ ಇದನ್ನು ನಿರ್ಲಕ್ಷಿಸಿತ್ತು. ವೈದ್ಯೆ ಕೊರೋನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇದೀಗ ವೈದ್ಯೆಗೂ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಟ್ವಿಟರ್ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಘಟನೆ ಕುರಿತು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಅವರು ಟ್ವೀಟ್’ನ್ನು ಸಚಿವ ಸುಧಾಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ನಿಮ್ಮ ಗಮನಕ್ಕೆ ತರುವುದೇನೆಂದರೆ, ಇದೊಂದು ಪ್ರಾಮಾಣಿಕ ಕಾಳಜಿಯಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಅಮೂಲ್ಯ ಗೌಡ ಅವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಕಳೆದ ವಾರ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಪಿಪಿಇ ಕಿಟ್ಸ್ ನೀಡುವುದಾಗಿ ದನಿ ಎತ್ತಿದ್ದರು ಎಂದು ಹೇಳಿದ್ದಾರೆ.
ಆಡಳಿತ ಮಂಡಳಿ ಅದನ್ನು ನಿರ್ಲಕ್ಷಿಸಿತ್ತಲ್ಲದೇ, ಧ್ವನಿ ಎತ್ತುತ್ತಿದ್ದಂತೆಯೇ ಕಿರುಕುಳ ನೀಡಲು ಆರಂಭಿಸಿತ್ತು ಎಂದು ವೈದ್ಯೆ ಅಮೂಲ್ಯ ಅವರ ಸಂಬಂಧಿಕ ಭಾರ್ಗವ್ ಅವರು ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇದು ಕೇವಲ ನನ್ನ ಸಹೋದರಿಯ ಸಂಕಷ್ಟವಷ್ಟೇ ಅಲ್ಲ. ಸರ್ಕಾರಿ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಸಾಕಷ್ಟು ವೈದ್ಯರು ಕಿರುಕುಳ ಅನುಭವಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಈ ನಡುವೆ ಆರೋಪವನ್ನು ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಡಿ ಎಚ್ ಅಶ್ವತ್ ನಾರಾಯಣ್ ಅವರು ತಿರಸ್ಕರಿಸಿದ್ದಾರೆ.
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಾರ್ಡ್ ಗಳಲ್ಲಿ ಪ್ರತೀಯೊಬ್ಬರೂ ಪಿಪಿಇ ಕಿಟ್ಸ್ ಗಳನ್ನು ಧರಿಸಿರುತ್ತಾರೆ. ಪಿಪಿಇ ಕಿಟ್ಸ್ ಗಳಿಗೆ ಸರ್ಕಾರದಿಂದ ಅನುಮತಿ ಕೂಡ ದೊರೆತಿದೆ ಎಂದಿದ್ದಾರೆ.
Comments are closed.