ಕರ್ನಾಟಕ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ ಮತ್ತಷ್ಟು ಉಲ್ಬಣ

Pinterest LinkedIn Tumblr


ಬೆಂಗಳೂರು: ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪ್ರಕರಣಗಳ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಸಕಲ ಸಿದ್ದತೆ ಆರಂಭಿಸಿದೆ, ಹೆಚ್ಚುತ್ತಿರುವ ರೋಗಿಗಳ ಹಿನ್ನೆಲೆಯಲ್ಲಿ ಪ್ರತಿದಿನ ಟೆಸ್ಟ್ ಮಾಡುವ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಪ್ರತಿದಿನ 4 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಇನ್ಮುಂದೆ ಬೆಂಗಳೂರಿನಲ್ಲಿ 7,500 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿದ್ದ ಸರ್ವಪಕ್ಷ ಸಭೆ ನಂತರ ಮಾತನಾಡಿದ ಆರ್,ಅಶೋಕ್ ಬೇರೆ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಮಾಡುತ್ತೇವೆ. ಬಿಬಿಎಂಪಿ ಪ್ರತಿವಾರ್ಡ್ ಗೆ ಕೊರೋನಾ ನಿಯಂತ್ರಿಸಲು 25 ಲಕ್ಷ ಮೀಸಲು ಇಡಲಾಗುತ್ತದೆ. ವಿಪಕ್ಷ ನಾಯಕರು ಸಲಹೆ ಸೂಚನೆ ಪರಿಗಣಿಸುತ್ತೇವೆ ಎಂದು ಹೇಳಿದರು.

ಬೆಡ್‌ಗಳ‌ ಅಲಾಟ್‌ಮೆಂಟ್‌ಗಾಗಿ ತುಷಾರ್‌ ಗಿರಿನಾಥ್‌ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಕೋವಿಡ್‌ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಮಸ್ಯೆ ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಆರ್‌.ಅಶೋಕ ತಿಳಿಸಿದ್ದಾರೆ.

ಒಂದು ವಾರದಲ್ಲಿ ಹೆಚ್ಚುವರಿಯಾಗಿ 7300 ಬೆಡ್‌ಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕಂಠೀರವ ಸ್ಟೇಡಿಯಂ, ಲೆಗೆಸಿ ಸೆಂಟರ್‌, ಇಂಟರ್‌ನ್ಯಾಷನಲ್‌ ಎಕ್ಸಿಬಿಷನ್‌ ಸೆಂಟರ್‌ಗಳಲ್ಲಿ ಚಿಕಿತ್ಸೆಗಾಗಿ ಬೆಡ್‌ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಲಭ್ಯತೆ ಬಗ್ಗೆ ನೀಲ ನಕಾಶೆ ತಯಾರಿಸಲಾಗುತ್ತದೆ. ಕೋವಿಡ್‌ ಪಾಸಿಟಿವ್‌ ಬೆಳಕಿಗೆ ಬಂದ ತಕ್ಷಣವೇ, ಆತನಿಗೆ ಎಲ್ಲಿ ಕಳುಹಿಸಬೇಕು ಎಂಬುದನ್ನು ಬೆಡ್‌ ಅಲಾಟ್‌ಮೆಂಟ್‌ ಕಮಿಟಿ ನಿರ್ಧರಿಸುತ್ತದೆ. ರೋಗಿ ಚಿಕಿತ್ಸೆಗೆ ಅಲೆದಾಡುವ ಸ್ಥಿತಿ ನಿರ್ಮಿಸುವುದಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪ್ರತಿದಿನ 100 ರಿಂದ 200 ಕೊರೋನಾ ಕೇಸ್ ಗಳು ದಾಖಲಾಗುತ್ತಿವೆ, ಹೀಗಾಗಿ ಮುಂದಿನ ತಿಂಗಳು ಎಷ್ಟು ರೋಗಿಗಳು ದಾಖಲಾಗಬಹುದೆಂದು ಸರ್ಕಾರ ಅಂದಾಜು ಮಾಡಿ, ಅದಕ್ಕಾಗಿ ಬ್ಲೂಪ್ರಿಂಟ್ ತಯಾರು ಮಾಡಲಾಗುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ, ಮುಂದಿನ ವಾರ ಹೆಚ್ಚುವರಿ 7,300 ಬೆಡ್ ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ, ಸರ್ಕಾರಿ ಸ್ವಾಮ್ಯದ ಕೋವಿಡ್ ಕೇಂದ್ರಗಳಲ್ಲಿ, 819 ಹಾಸಿಗೆಗಳಿದ್ದು, ಅವುಗಳಲ್ಲಿ 625 ತುಂಬಿದ್ದು, 190 ಬೆಡ್ ಖಾಲಿ ಇವೆ ಎಂದು ಹೇಳಿದ್ದಾರೆ. ಇನ್ನು ಕೆಲವು ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಗುರುತಿಸಿದ್ದು, ಶೇ.,50 ರಷ್ಟು ಬೆಡ್ ಗಳನ್ನು ಕೊರೋನಾ ರೋಗಿಗಳಿಗೆ ಮೀಸಲಿಡುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು.

ಇನ್ನೂ ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ನಗರ ಕಾಂಗ್ರೆಸ್ ಶಾಸಕರು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೆ ತರುವಂತಂ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಲಾಕ್ ಡೌನ್ ನಿಂದ ರಾಜ್ಯದ ಆರ್ಥಿಕತೆ ಕುಸಿಯಲಿದೆ, ಹೀಗಾಗಿ ಅದರ ವಿರುದ್ಧ ಹೋರಾಡಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Comments are closed.