ಕರ್ನಾಟಕ

ಇಂದು ನಡೆಯುವ SSLC ಪರೀಕ್ಷೆ ಸರ್ಕಾರಕ್ಕೆ ಪ್ರತಿಷ್ಠೆಯಲ್ಲ; ಮಕ್ಕಳ ಭವಿಷ್ಯ ಮುಖ್ಯ: ಸುರೇಶ್ ಕುಮಾರ್

Pinterest LinkedIn Tumblr


ಬೆಂಗಳೂರು(ಜೂನ್ 24): ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದಲೇ ಪರೀಕ್ಷೆ ನಡೆಸುತ್ತಿದ್ದೇವೆ. ನಾಳೆ(ಗುರುವಾರ) ಪ್ರಾರಂಭವಾಗಲಿರುವ ಪರೀಕ್ಷೆಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ಧೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪರೀಕ್ಷೆಯನ್ನು ಯಶಸ್ವಿಯಾಗಿ ಆಯೋಜಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ನಾಳೆಯಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಾದ್ಯಂತ 8,48,203 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ 1,13,800 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯಾದ್ಯಂತ 10 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದು ಕ್ವಾರಂಟೈನ್​ನಲ್ಲಿದ್ಧಾರೆ. ಇವರಿಗೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಆದರೆ ಆಗಸ್ಟ್ ತಿಂಗಳಲ್ಲಿ ಇವರಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುವುದು ಎಂದರು.

ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಇರುತ್ತದೆ. ಕಂಟೈನ್ಮೆಂಟ್ ಜೋನ್​ನಲ್ಲಿದ್ದ 26 ಪರೀಕ್ಷಾ ಕೇಂದ್ರಗಳನ್ನ ಸ್ಥಳಾಂತರ ಮಾಡಲಾಗಿದೆ. ಎಲ್ಲಾ 5757 ಪರೀಕ್ಷಾ ಕೇಂದ್ರಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ. ಮನೆಯಲ್ಲಿ ಮಕ್ಕಳನ್ನು ಕಾಣುವ ರೀತಿಯಲ್ಲೇ ಪರೀಕ್ಷಾ ಕೇಂದ್ರಗಳಲ್ಲೂ ಕಾಳಜಿ ವಹಿಸಲಾಗುತ್ತದೆ. ಆರೋಗ್ಯ ತಪಾಸಣಾ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಸುರಕ್ಷತೆಗೆ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಕೆಎಸ್ಸಾರ್ಟಿಸಿ ಸಿಬ್ಬಂದಿ ಸೇರಿ 1.5 ಲಕ್ಷ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಮಕ್ಕಳು ಪರೀಕ್ಷೆಗೆ ಒಂದು ಗಂಟೆ ಮುಂಚಿತವಾಗಿ ಎಕ್ಸಾಮಿನೇಶನ್ ಸೆಂಟರ್​ಗೆ ಬರಬೇಕು. ಮನೆಯಿಂದಲೇ ನೀರಿನ ಬಾಟಲ್ ತಂದರೆ ಒಳ್ಳೆಯದು. ತರದಿದ್ದರೆ ಇಲ್ಲಿಯೇ 200 ಎಂಎಲ್ ನೀರಿನ ಬಾಟಲ್ ನೀಡಲಾಗುವುದು ಪರೀಕ್ಷಾ ಕೇಂದ್ರಗಳ ಒಂದು ಹಾಲ್​ನಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನ ಕೂರಿಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗಳ ತಾಪಮಾನ ಪರೀಕ್ಷೆ ಮಾಡುತ್ತೇವೆ. ಎಲ್ಲರಿಗೂ ಮಾಸ್ಕ್ ಕಡ್ಡಾಯ ಇರುತ್ತದೆ. ಜ್ವರ, ಕೆಮ್ಮು, ನೆಗಡಿ ಇರುವವರಿಗೆ ಎನ್95 ಮಾಸ್ಕ್ ನೀಡಲಾಗುವುದು ಎಂದು ಶಿಕ್ಷಣ ಸಚಿವರು ವಿವರ ನೀಡಿದರು.

ಸಾರಿಗೆ ಸಂಪರ್ಕ ಇಲ್ಲದ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಗಡಿಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಝರಾಕ್ಸ್, ಸೈಬರ್ ಸೆಂಟರ್​ಗಳಿದ್ದರೆ ಅವನ್ನ ಮುಚ್ಚಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಇನ್ನು, ಗೃಹ ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ಪರೀಕ್ಷಾ ಕೇಂದ್ರಗಳ ದ್ವಾರದಲ್ಲಿ ಜನಸಂದಣಿಯಾಗದಂತೆ ಎಚ್ಚರ ವಹಿಸುತ್ತೇವೆ. ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ವೇಳೆ ಮಕ್ಕಳು ಗುಂಪು ಸೇರಿದಂತೆ ನಿಗಾ ವಹಿಸಲು ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿ ಜೊತೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಿಬ್ಬಂದಿ ಕೂಡ ಇರುತ್ತದೆ. ಶಿಕ್ಷಣ ಇಲಾಖೆಗೆ ಗೃಹ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

Comments are closed.