ಕರ್ನಾಟಕ

ಇಂದಿನಿಂದ ಬೆಂಗಳೂರಿನ 4 ವಾರ್ಡ್​ಗಳಲ್ಲಿ ಸಂಪೂರ್ಣ ಲಾಕ್​ಡೌನ್

Pinterest LinkedIn Tumblr


ಬೆಂಗಳೂರು: ರಾಜಧಾನಿ ಬೆಂಗಳೂರಿನ ಆರೋಗ್ಯ ಹಾಗೂ ಜನರ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿರುವ ಕೊರೋನಾಗೆ ಬ್ರೇಕ್ ಹಾಕಲು ಕೊನೆಗೂ ಸರ್ಕಾರ ಮುಂದಾಗಿದೆ.

ಸೋಂಕಿನ ಸಾಂಕ್ರಾಮಿಕತೆ ಹೆಚ್ಚಾಗಿರುವ ಹಾಟ್​ಸ್ಪಾಟ್​ಗಳ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪರಿಣಾಮಕಾರಿ ಪ್ರಯತ್ನಕ್ಕೆ ಮುಂದಾಗಿದೆ. ಇದರ ಮೊದಲ ಭಾಗವಾಗಿ ನಾಲ್ಕು ಕೊರೋನಾ ಹಾಟ್​ಸ್ಪಾಟ್​ಗಳನ್ನು ಕಂಪ್ಲೀಟ್ ಲಾಕ್ ಡೌನ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಶತಾಯಗತಾಯ ಕೊರೋನಾ ಸೋಂಕಿಗೆ ಬ್ರೇಕ್ ಹಾಕಲೇಬೇಕೆಂದು ನಿರ್ಧರಿಸಿದಂತಿರುವ ಸರ್ಕಾರ ಲಾಕ್​ಡೌನ್ ನಿಯಮ ಯಾರೇ ಉಲ್ಲಂಘಿಸಿದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಿದೆ.

ಇರುವುದರಲ್ಲಿ ಪರಿಸ್ಥಿತಿ ನಿಭಾಯಿಸುವುದಕ್ಕೆ ಸರ್ಕಾರ ಮಾಡಿದ ಪ್ರಯತ್ನ ನಿಷ್ಫಲವಾಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗಲೇ ಮಾತು ಕೇಳದ ಜನ ಲಾಕ್ ಡೌನ್ ಸಡಿಲಿಕೆ ನಂತರವಂತೂ ನಿರ್ಲಕ್ಷ್ಯದ ಪರಮಾವಧಿ ಪ್ರದರ್ಶಿಸಿದ್ದರ ಪರಿಣಾಮವೇ ಇವತ್ತು ಸೋಂಕು ಬೆಂಗಳೂರಿಗೆ ಬೆಂಗಳೂರೇ ಕನಲಿ ಹೋಗುವ ಮಟ್ಟದಲ್ಲಿ ವ್ಯಾಪಿಸುವುದಕ್ಕೆ ಕಾರಣವಾಗಿದೆ. ಇನ್ನು ಮೈಮರೆತರೆ ದೊಡ್ಡ ಪ್ರಮಾದವೇ ನಡೆದು ಹೋದೀತು ಎಂದು ಎಚ್ಚೆತ್ತುಕೊಂಡಿರುವ ಸರ್ಕಾರ ಲಾಕ್ ಡೌನ್ ಜಾರಿ ನಿರ್ಧಾರವನ್ನು ಪ್ರಕಟಿಸಿಯೇ ತೀರಿದೆ. ಕಮ್ಯುನಿಟಿ ಸ್ಪ್ರೆಡ್ ಸ್ವರೂಪ ಪಡೆದಿರುವ ಸೋಂಕು ಹೆಚ್ಚಾಗಿರುವ ನಗರದ ನಾಲ್ಕು ಪ್ರಮುಖ ಜನದಟ್ಟಣೆಯ ಏರಿಯಾಗಳನ್ನು ಕಂಪ್ಲೀಟ್ ಸೀಲ್ ಡೌನ್ ಮಾಡಿದೆ.

ಯಾವೆಲ್ಲಾ ಏರಿಯಾಗಳು ಲಾಕ್​ಡೌನ್
ಕೊರೋನಾ ಸೋಂಕು ಸಾಂಕ್ರಾಮಿಕತೆಯ ಸ್ವರೂಪ ಪಡೆದಿರುವ ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನಾಲ್ಕು ವಾರ್ಡ್ ಪ್ರದೇಶಗಳನ್ನು ಲಾಕ್ ಡೌನ್ ವ್ಯಾಪ್ತಿಗೆ ತರಲಾಗಿದೆ. ಆ ಪೈಕಿ ಕೃಷ್ಣರಾಜೇಂದ್ರ ಮಾರುಕಟ್ಟೆ, ಚಿಕ್ಕಪೇಟೆ, ಚಾಮರಾಜಪೇಟೆ ಹಾಗೂ ಕಲಾಸಿಪಾಳ್ಯ ಪ್ರದೇಶಗಳಲ್ಲಿ ಲಾಕ್​ಡೌನ್ ನಾಳೆಯಿಂದಲೇ ಲಾಕ್ ಆಗಲಿದೆ. ಲಾಕ್ ಡೌನ್ ನಿಯಮಾವಳಿಯನ್ನು ಉಲ್ಲಂಘಿಸುವ ಅವಕಾಶವನ್ನೇ ಈ ಬಾರಿ ನೀಡಿಲ್ಲ. ಲಾಕ್ ಡೌನ್ ಇರುವ ಮೇಲ್ಕಂಡ ಪ್ರದೇಶಗಳಲ್ಲಿ ನಿತ್ಯ ಬಳಕೆ ವಸ್ತುಗಳನ್ನು ತರಲು ಜನ ಬರಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಅಂಥವರ ವಿರುದ್ದ ಕಠಿಣಾತೀಕಠಿಣ ಕ್ರಮ ಅಂದ್ರೆ ಕ್ರಿಮಿನಲ್ ಕೇಸ್ ಜಡಿಯುವ ಸ್ವಾತಂತ್ರ್ಯವನ್ನು ಪೊಲೀಸರಿಗೆ ಸರ್ಕಾರ ನೀಡಿದೆ.

ಲಾಕ್​ಡೌನ್ ನಾಲ್ಕು ವಾರ್ಡ್ ಪ್ರದೇಶಗಳಲ್ಲಿ ಜಾರಿಯಾಗುವುದರ ಜೊತೆಗೆ ಸೋಂಕಿನ ವ್ಯಾಪಕತೆ ಹೆಚ್ಚಾಗುತ್ತಿರುವ ಸಿದ್ದಾಪುರ, ವಿವಿ ಪುರ, ಕಲಾಸಿಪಾಳ್ಯ, ವಿದ್ಯಾರಣ್ಯಪುರ ಹಾಗೂ ಧರ್ಮರಾಯ ದೇವಸ್ಥಾನ ವಾರ್ಡ್ ಪ್ರದೇಶಗಳಲ್ಲಿ ಸೀಲ್​ಡೌನ್ ಜಾರಿಗೊಳಿಸಲಾಗುತ್ತಿದೆ. ಸೋಂಕಿಗೆ ಕಾರಣವಾಗುವ ಪ್ರದೇಶಗಳಲ್ಲಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ಸೇವೆಗಳನ್ನು ಬಿಟ್ಟರೆ ಉಳಿದೆಲ್ಲವಕ್ಕೂ ನಿರ್ಬಂಧ ಹೇರಲಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಬಿಬಿಎಂಪಿ ಸಿಬ್ಬಂದಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜತೆಗೆ ಸಮನ್ವಯ ಸಾಧಿಸಿ ಸೀಲ್ ಡೌನ್ ಜಾರಿಯನ್ನು ಪರಿಣಾಮಕಾರಿಗೊಳಿಸುವ ಪ್ರಯತ್ನ ನಡೆದಿವೆ. ಇದನ್ನು ಹೊರತುಪಡಿಸಿ ಸೋಂಕಿಗೆ ಕಾರಣವಾಗುವ ನಗರದ ಕೆಲವು ಮಾರುಕಟ್ಟೆಗಳನ್ನು ಅನಿರ್ಧಿಷ್ಟಾವಧಿಗೆ ಬಂದ್ ಮಾಡುವ ನಿರ್ಧಾರಕ್ಕೂ ಬಿಬಿಎಂಪಿ ಬಂದಿದೆ.

ಲಾಕ್ ಡೌನ್- ಸೀಲ್ ಡೌನ್ ಗೆ ಸರ್ಕಾರ ಮುಂದಾಗಿರುವ ಕ್ರಮದ ಬಗ್ಗೆ ಬೆಂಗಳೂರಿಗರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರಿಗಳು ತಮ್ಮ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಹೇಳಿದರೆ, ನಾಗರಿಕರು ನಮ್ಮ ಜೀವಗಳು ಉಳಿದುಕೊಂಡರೆ ತಾನೇ ಜೀವನ. ಹಾಗಾಗಿ ಲಾಕ್ ಡೌನ್ ಜಾರಿಯಾಗುತ್ತಿರುವುದು ಸೂಕ್ತ ಎನ್ನುತ್ತಾರೆ. ಲಾಕ್ ಡೌನ್ ನ ಆತಂಕ ಕೇವಲ ನಾಲ್ಕು ವಾರ್ಡ್ ಗಳಿಗೆ ಸೀಮಿತವಾಗಿಲ್ಲ. ಎಲ್ಲಾ ವಾರ್ಡ್​ಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗುತ್ತಿದ್ದು, ಅಲ್ಲಿ ನಡೆಯುವ ಪರೀಕ್ಷೆಗಳು, ಅದರಿಂದ ಬರುವ ವರದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದರೆ ಆ ಏರಿಯಾಗಳಲ್ಲೂ ಲಾಕ್ ಡೌನ್ ಅನಿವಾರ್ಯವಾಗಿ ಜಾರಿಗೊಳಿಸಬೇಕಾಗುತ್ತದೆ ಎಂದು ಸರ್ಕಾರ ಸೂಕ್ಷ್ಮವಾಗಿ ಮುನ್ನೆಚ್ಚರಿಕೆ ನೀಡಿದೆ.

ಹಾಗಾಗಿ ಸೋಂಕು ಹತೋಟಿಗೆ ಬರದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬೆಂಗಳೂರೇ ಲಾಕ್ ಡೌನ್ ಆಗುವ ಆತಂಕವಿದೆ. ಹಾಗಾಗಬಾರದು ಅಂದರೆ ಜನರು ಸ್ವಯಂನಿಯಂತ್ರಣ ಹೇರಿಕೊಂಡು ತಮ್ಮ ಜೀವ-ಜೀವನದ ರಕ್ಷಣೆಗೆ ಆದ್ಯತೆ ಕೊಡಬೇಕಿದೆ.

Comments are closed.