ಬೆಂಗಳೂರು: ಕೇಂದ್ರ ಸರಕಾರ ಅನುಮತಿ ನೀಡಿದರೆ ಜೂನ್ ಒಂದರಿಂದ ಶಾಪಿಂಗ್ ಮಾಲ್, ಹೋಟೆಲ್ ಆರಂಭಿಸಲು ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಲಿದೆ.
ಜೊತೆಗೆ ಮಂದಿರ, ಮಸೀದಿ, ಚರ್ಚ್‌ಗಳ ಪ್ರವೇಶಕ್ಕೂ ಅವಕಾಶ ಸಿಗುವ ನಿರೀಕ್ಷೆಯಿದೆ. ಈ ಸಂಬಂಧ ನಾನಾ ಸಂಘಟನೆಗಳ ಪದಾಧಿಕಾರಿಗಳು ಕಳೆದ ಹಲವು ದಿನಗಳಿಂದ ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಮಂಗಳವಾರವೂ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹಾಗೂ ಅಖಿಲ ಭಾರತ ಶಾಪಿಂಗ್ ಮಾಲ್ ಸಂಘದ ಪ್ರಮುಖರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರ ನಡುವೆ ಸಾಮಾಜಿಕ ಅಂತರ, ಸ್ವಚ್ಛತೆ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕೆಲಸಗಾರರಿಗೆ ಮಾಸ್ಕ್ ಇತ್ಯಾದಿ ಸುರಕ್ಷಾ ಸಾಮಗ್ರಿ ನೀಡಲಾಗುವುದು ಎಂದು ಸಿಎಂ ಅವರಿಗೆ ಈ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದರು.
ಕೇಂದ್ರದ ಮಾರ್ಗಸೂಚಿ ಬರಲಿ
ಈ ಸಂಬಂಧ ಕೇಂದ್ರದ ಮಾರ್ಗಸೂಚಿಯನ್ನು ನಿರೀಕ್ಷಿಸಲಾಗುತ್ತಿದೆ. ಕೇಂದ್ರದ ನಿರ್ದೇಶನ ಬರುತ್ತಿದ್ದಂತೆ ಹೋಟೆಲ್ ಶಾಪಿಂಗ್ ಮಾಲ್ ಪುನರಾರಂಭಕ್ಕೆ ರಾಜ್ಯದಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು. ಕೇಂದ್ರದ ಗೈಡ್‌ಲೈನ್ಸ್ ಪ್ರಕಾರ ಮೇ ಅಂತ್ಯದವರೆಗೆ ಈ ಚಟುವಟಿಕೆಗೆ ಅವಕಾಶವಿಲ್ಲ. ಜೂನ್ ಒಂದರಂದು ಈ ನಿರ್ಬಂಧ ತೆರವಾಗಬಹುದು. ಅಲ್ಲಿಯವರೆಗೆ ಕಾಯುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ನೇತೃತ್ವದ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿತು. ನಂತರ ಶಾಪಿಂಗ್ ಮಾಲ್ ಸಂಘದ ಎಂ.ಆರ್. ರಘುನಂದನ್ ಮತ್ತಿತರರು ಭೇಟಿಯಾದರು.
ಮಂದಿರ, ಮಸೀದಿ, ಚರ್ಚ್
ರಂಜಾನ್ ಬಳಿಕ ಮಂದಿರ, ಮಸೀದಿ, ಚರ್ಚ್ ಗೆ ಭೇಟಿ ನೀಡಲು ಅನುಮತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ರಂಜಾನ್ ಮುಗಿದಿದೆ. ಆದರೆ, ಈ ವಿಚಾರದಲ್ಲೂ ಕೇಂದ್ರದ ಮಾರ್ಗಸೂಚಿಗೆ ರಾಜ್ಯ ಸರಕಾರ ಕಾಯುತ್ತಿದೆ.
Comments are closed.