ಕರ್ನಾಟಕ

ಮಹಿಳೆಗೆ ‘ರಾಸ್ಕಲ್‌’ ಸಚಿವರ ವರ್ತನೆಗೆ ಯಡಿಯೂರಪ್ಪ ಅಸಮಾಧಾನ

Pinterest LinkedIn Tumblr


ಬೆಂಗಳೂರು: ರೈತ ಮಹಿಳೆಗೆ ಅಶ್ಲೀಲವಾಗಿ ನಿಂದಿಸಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ವರ್ತನೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಚಿವರ ವರ್ತನೆಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದಿದ್ದಾರೆ.

ಕೋಲಾರ ತಾಲೂಕಿನ ಎಸ್‌.ಅಗ್ರಹಾರ ಎಂಬಲ್ಲಿ ಕೆರೆ ವೀಕ್ಷಿಸಲು ಆಗಮಿಸಿದ್ದ ಸಚಿವ ಮಾಧುಸ್ವಾಮಿ ಅವರ ಬಳಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಸದಸ್ಯರು ಕೆರೆ ಒತ್ತುವರಿ ತೆರವು ಸಂಬಂಧವಾಗಿ ಮನವಿ ಸಲ್ಲಿಸಲು ಬಂದಿದ್ದರು.

ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಸಂದರ್ಭದಲ್ಲಿ ಆಕ್ರೋಶಗೊಂಡ ಅವರು ಮಾತನಾಡುತ್ತಿದ್ದ ಮಹಿಳೆಯನ್ನು ತಡೆಯಲು ಯತ್ನಿಸಿದರು. ಈ ವೇಳೆ ಏಕಾಏಕಿ ಕೋಪಗೊಂಡ ಅವರು ಮಹಿಳೆಗೆ ರಾಸ್ಕಲ್‌ ಎಂಬ ಪದ ಬಳಸಿದ್ದಲ್ಲದೆ ಪೊಲೀಸರಿಗೆ ಅವರನ್ನು ಎಳೆದೊಯ್ಯುವಂತೆ ಹೇಳುವ ಮೂಲಕ ರೈತ ಮಹಿಳೆಯರನ್ನು ಅವಮಾನಿಸಿದ್ದರು.

ಸಚಿವರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ “ಸಚಿವರು ಈ ರೀತಿ ಮಾತನಾಡಿದ್ದು ಸಹಿಸಲು ಸಾಧ್ಯವಿಲ್ಲ. ನಾವು ಅವರಿಗೆ ಎಚ್ಚರಿಕೆ ನೀಡುತ್ತೇನೆ. ಈ ರೀತಿ ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ. ನಾನು ರೈತ ಮಹಿಳೆ ಹಾಗೂ ಮಾಧುಸ್ವಾಮಿ ಜೊತೆಗೆ ಮಾತನಾಡುತ್ತೇನೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇನೆ” ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಸಚಿವರ ವರ್ತನೆ ವ್ಯಾಪಕ ಖಂಡನೆಗೆ ಕಾರಣವಾಗುತ್ತಿದೆ. ಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಮಾಧುಸ್ವಾಮಿ ವರ್ತನೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವರಾಗಿ ಜನಸಾಮಾನ್ಯರ ಬಳಿಕ ಇಂತಹ ವರ್ತನೆ ತೋರಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡರೂ ಮಾಧುಸ್ವಾಮಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಮಾಧುಸ್ವಾಮಿ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದು “ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ.ಬಿಎಸ್‌ವೈ ಅವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

Comments are closed.