ಕರ್ನಾಟಕ

ಸೋನಿಯಾ ವಿರುದ್ಧ ಎಫ್​ಐಆರ್​ ಹಿನ್ನೆಲೆ; ಮುಖ್ಯಮಂತ್ರಿ ಭೇಟಿಯಾದ ರಾಜ್ಯದ ಕಾಂಗ್ರೆಸ್ ನಾಯಕರು

Pinterest LinkedIn Tumblr


ಬೆಂಗಳೂರು (ಮೇ 21): ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದ ಸಾಗರ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಪ್ರಧಾನಿ ಮೋದಿ ಪಿಎಂ ಕೇರ್ ಫಂಡ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೇ 11ರಂದು ಟ್ವೀಟ್ ಮಾಡಲಾಗಿತ್ತು. ಪ್ರಧಾನಮಂತ್ರಿ ಮೋದಿಯವರನ್ನು ಅವಹೇಳನ ಮಾಡಿದ ಆರೋಪದಲ್ಲಿ ಸಾಗರದ ವಕೀಲ ಪ್ರವೀಣ್ ಎಂಬುವವರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಆದರೆ, ಇದರ ವಿರುದ್ಧ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ನಾಯಕರು ಈ ದೂರನ್ನು ಸ್ವೀಕರಿಸಿ, ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಸಾಗರದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ರಾಜಕೀಯ ದುರುದ್ದೇಶದಿಂದ ಈ ಕೇಸ್ ದಾಖಲಿಸಲಾಗಿದೆ. ಸೋನಿಯಾ ಗಾಂಧಿ ಅವರ ಟ್ವೀಟ್ ಅನ್ನು ಅಪಾರ್ಥ ಮಾಡಿಕೊಂಡು ದೂರು ನೀಡಲಾಗಿದೆ. ಹೀಗಾಗಿ, ಆ ದೂರು ಸ್ವೀಕರಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿರುವ ಕಾಂಗ್ರೆಸ್ ನಾಯಕರಾದ ಸಲೀಂ ಅಹಮದ್, ಮಾಜಿ ಸಂಸದ ಉಗ್ರಪ್ಪ, ವಿ.ಆರ್. ಸುದರ್ಶನ್ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕಿ ವಿರುದ್ಧ ತಪ್ಪು ಮಾಹಿತಿ ನೀಡಿ, ದೂರು ನೀಡಿದ ವಕೀಲನ ಮಾತು ಕೇಳಿ ಕೇಸ್ ದಾಖಲಿಸಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿಯಾದ ಬಳಿಕ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಾಗರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಘಟನೆಯಿಂದ ಇಡೀ ದೇಶಕ್ಕೆ ಆಶ್ಚರ್ಯವಾಗಿದೆ. ನಮ್ಮ ನಾಯಕಿ ತಮ್ಮ ಮಾಹಿತಿ ಏನಿದೆಯೋ ಅದನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಬಳಿಯಿರುವ ನಿಖರ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ಪ್ರವೀಣ್ ಎಂಬ ಯುವಕ ತನ್ನ ಸಂಬಂಧಿ ಪೊಲೀಸ್ ಮೂಲಕ ಎಫ್ಐಆರ್ ದಾಖಲಿಸಿದ್ದಾನೆ. ಈ ಬಗ್ಗೆ ನಾನು ಗೃಹ ಸಚಿವರ ಜೊತೆ ಮಾತಾಡಿದ್ದೇನೆ. ಮುಖ್ಯಮಂತ್ರಿಗಳನ್ನೂ ಭೇಟಿಯಾಗಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಬಿ ರಿಪೋರ್ಟ್ ಮಾಡಲು‌ ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

Comments are closed.