ಕರ್ನಾಟಕ

ನನಗೆ ಕ್ಯಾನ್ಸರ್ ಇರುವುದು ನಿಜ: ಮುತ್ತಪ್ಪ ರೈ

Pinterest LinkedIn Tumblr


ರಾಮನಗರ: ನನಗೆ ಹುಷಾರಿಲ್ಲದಿರುವುದು ನಿಜ. ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್‍ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ತಮ್ಮ ಆರೋಗ್ಯದ ಬಗ್ಗೆ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಎನ್.ಮುತ್ತಪ್ಪ ರೈ ತಾಲೂಕಿನ ಬಿಡದಿಯ ನಿವಾಸದಲ್ಲಿ ತಿಳಿಸಿದ್ದಾರೆ.

ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯದ ಬಗ್ಗೆ ಕಳೆದ 5 ತಿಂಗಳಿನಿಂದ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ಮುತ್ತಪ್ಪ ರೈಗೆ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾರೆ ಬದುಕುವುದು ಖಚಿತವಿಲ್ಲ. ಸ್ವಲ್ಪ ದಿನ ಮಾತ್ರ ಬದುಕಿರುತ್ತಾರೆ ಎಂದು ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದವು.

ಈ ಹಿನ್ನೆಲೆಯಲ್ಲಿ ಇಂದು ತಮ್ಮ ನಿವಾಸದಲ್ಲಿ ಮಾತನಾಡಿದ ಮುತ್ತಪ್ಪ ರೈ ಅವರು, ನನಗೆ ಕ್ಯಾನ್ಸರ್ ಇರುವುದು ನಿಜ. ಕಳೆದ ಮೂರು ತಿಂಗಳ ಹಿಂದೆ ಕುಕ್ಕೆಗೆ ಹೋಗಿ ಬರುವಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ಪರೀಕ್ಷೆಗೆ ಹೋಗಿದ್ದಾಗ ವೈದ್ಯರು ನಿಮಗೆ ಕ್ಯಾನ್ಸರ್ ಇದ್ದು, ಲಿವರ್ ತನಕ ಹರಡಿದೆ. ಬದುಕುವುದು ಬಹುತೇಕ 15 ದಿನಗಳು ಅಷ್ಟೇ ಎಂದು ತಿಳಿಸಿದರು. ಚಿಕಿತ್ಸೆಗಾಗಿ ದೆಹಲಿಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದುಕೊಂಡು ಇಪ್ಪತ್ತು ದಿನದಲ್ಲಿ ಶೇ.90% ರಷ್ಟು ಸುಧಾರಿಸಿದ್ದೆ. ನಂತರ ಮತ್ತೊಂದು ಚೆಕಫ್ ಮಾಡಿದಾಗ ಕ್ಯಾನ್ಸರ್ ಬ್ರೈನ್ ತನಕ ಹರಡಿತ್ತು. ಬಳಿಕ ವೈದ್ಯರು ನೀಡಿದ ಚಿಕಿತ್ಸೆ ಹಾಗೂ ನನ್ನ ವಿಲ್ ಪವರ್ ನಿಂದ ಇಂದು ಕ್ಯಾನ್ಸರ್ ವಿರುದ್ಧ ಜಯಸಿದ್ದು ಆರಾಮಾಗಿ ಬದುಕಿದ್ದೇನೆ ಎಂದರು.

ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಮುತ್ತಪ್ಪ ರೈ ಕೆಲವು ತಿಂಗಳಿನಿಂದ ಉತ್ತಮ ಆಡಳಿತ ನಡೆಸುತ್ತಿದ್ದರು. ಅದರಲ್ಲೂ ಗ್ರಾಮೀಣ ಭಾಗದ ಕ್ರೀಡಾಪಟುಗಳ ನೆರವಿಗೆ ನಿಲ್ಲುವುದರ ಮೂಲಕ ಉತ್ತಮ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಆದರೆ ಇದೀಗ ಆರೋಗ್ಯದ ಸಮಸ್ಯೆಯಿಂದ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಡಿಸಿಎಂ ಅಶ್ವಥ್ ನಾರಾಯಣ್‍ರವರು ಕೂಡಾ ಆ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಸದ್ಯಕ್ಕೆ ಆರಾಮಾಗಿದ್ದು, ನನಗೇನೂ ತೊಂದರೆಯಿಲ್ಲ. ಎಷ್ಟು ದಿನ ಬದುಕುತ್ತೇನೋ ದೇವರಿಗೆ ಗೊತ್ತು ಸಾಯೋದಕ್ಕೆ ಹೆದರುವುದಿಲ್ಲ ಎಂದು ರೈ ಹೇಳಿದರು.

ತಮ್ಮ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಎರಡು ಸ್ಥಾನವನ್ನು ಹೊಂದಿದ್ದ ಮುತ್ತಪ್ಪ ರೈ ಅವರು ಇದೀಗ ಕೆಎಸ್‍ಎಎ ಜೊತೆಗೆ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನವನ್ನು ಸಹ ತೊರೆದು ಆ ಸ್ಥಾನಕ್ಕೆ ಬೆಂಗಳೂರು ನಗರಾಧ್ಯಕ್ಷರಾಗಿದ್ದ ಜಗದೀಶ್‍ರನ್ನು ಆಯ್ಕೆ ಮಾಡಿದ್ದಾರೆ.

Comments are closed.