ಕರ್ನಾಟಕ

ತೇಜಸ್ವಿ, ಸೂಲಿಬೆಲೆ ದೇಶಭಕ್ತ, ಯುಗಪುರುಷರಲ್ಲ- ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಹಿಂದೂ ನಾಯಕರ ಕೊಲೆಗೆ ಸಂಚು ರೂಪಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಡಿಗೇಡಿಗಳ ಕೃತ್ಯಕ್ಕೆ ಧರ್ಮದ ಲೇಪನ ಬೇಡ. ಉದ್ದೇಶ ಪೂರ್ವಕವಾಗಿ ಒಂದು ಧರ್ಮವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಮಹಾನ್ ದೇಶಭಕ್ತರೇನೂ ಅಲ್ಲ. ಯುಗಪುರುಷರು ಕೂಡ ಅಲ್ಲ. ಹೀಗಿದ್ದರೂ ಅವರನ್ನು ಹುತಾತ್ಮ ಮಾಡಲು ಹೋರಟಿದ್ದೀರಾ ಅಂತ ಪ್ರಶ್ನೆ ಮಾಡಿದರು. ಸಂಸದ ತೇಜಸ್ವಿ ಸೂರ್ಯ ಬಗ್ಗೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ತೇಜಸ್ವಿ ಸೂರ್ಯ ಕೊಡುಗೆ ಬೆಂಗಳೂರಿಗೆ ಏನು?, ಏನ್ ಸಾಧನೆ ಮಾಡಿದ್ದಾರೆ ಅಂತ ಇವರನ್ನು ಕೊಲ್ಲೋಕೆ ಹೋಗುತ್ತಾರೆ ಎಂದು ಉಡಾಫೆಯಾಗಿ ಮಾತನಾಡಿದರು.

ಯಾರೋ ತಪ್ಪು ಮಾಡಿದ್ರು ಅಂತ ಒಂದು ಸಮುದಾಯದ ಮೇಲೆ ತಪ್ಪು ಹೊರಿಸಬೇಡಿ. ಉದ್ದೇಶಪೂರ್ವಕವಾಗಿ ಒಂದು ಸಮುದಾಯ ಟಾರ್ಗೆಟ್ ಮಾಡಬೇಡಿ. ತನಿಖೆ ಮಾಡಿ ಸತ್ಯ ಇದ್ದರೆ ಯಾವುದೇ ಸಂಘಟನೆ ಕ್ರಮ ತೆಗೆದುಕೊಳ್ಳಿ ಎಂದು ಇದೇ ವೇಳೆ ಕುಮಾರಸ್ವಾಮಿ ಒತ್ತಾಯಿಸಿದರು.

ಏನಿದು ಪ್ರಕರಣ?:
ದೇಶಾದ್ಯಂತ ಪೌರತ್ವ ಕಾಯ್ದೆ ಜಾರಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಡಿಸೆಂಬರ್ 22ರಂದು ನಗರದ ಟೌನ್ ಹಾಲ್ ನಲ್ಲಿ ಸಿಎಎ ಪರ ಜನಜಾಗೃತಿ ಹೊರಟಿದ್ದ ವರುಣ್ ಮೇಲೆ ಎಸ್‍ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ರಾಡ್ ಹಾಗೂ ಲಾಂಗ್ ಗಳಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.

ಬಂಧಿತ ಎಸ್‍ಡಿ ಪಿಐ ಕಾರ್ಯಕರ್ತರಾದ ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ಧಿಕ್, ಅಕ್ಬರ್ ಪಾಷಾ, ಸನಾ ಹಾಗೂ ಸಾಧಿಕ್ ಉಲ್ ಅಮೀನ್ ವಿಚಾರಣೆ ನಡೆಸಿದಾಗ, ವರುಣ್ ಮೇಲೆ ಹಲ್ಲೆಗೆ ವೈಯಕ್ತಿಕ ಕಾರಣವೇ ಇಲ್ಲ. ಆರೋಪಿಗಳಿಗೂ ವರುಣ್ ಗೂ ಸಂಬಂಧವೇ ಇಲ್ಲ. ಸಿಎಎ ಪರವಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಆತನ ಹತ್ಯೆಗೆ ಮುಂದಾಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಅಲ್ಲದೆ ಜನಜಾಗೃತಿ ರ್ಯಾಲಿ ವೇಳೆ ಕಲ್ಲು ಕೂಡ ತೂರಲಾಗಿತ್ತು. ಕಲ್ಲುಗಳನ್ನು ತೂರಿ ಗುಂಪು ಚದುರಿಸುವ ಪ್ಲಾನ್ ಮಾಡಲಾಗಿತ್ತು. ಜನ ಚದುರುತ್ತಿದ್ದಂತೆ ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಆಲೋಚಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

Comments are closed.