ಕರ್ನಾಟಕ

ಟೆಕ್ಕಿಗೆ ದಿನಕ್ಕೆ 8 ಗಂಟೆ ಸ್ನಾನ ಮಾಡುವ ‘ಗೀಳು’: ಬೇಸತ್ತು ಪತ್ನಿ ಡೈವೋರ್ಸ್

Pinterest LinkedIn Tumblr


ಬೆಂಗಳೂರು: ಒಬ್ಬ ವ್ಯಕ್ತಿ ದಿನಕ್ಕೆ ಅಬ್ಬಬ್ಬಾ ಎಂದರೆ ಎಷ್ಟು ಬಾರಿ ಸ್ನಾನ ಮಾಡಬಹುದು? ಹೆಚ್ಚೆಂದರೆ ಬೆಳಗ್ಗೆ ಮತ್ತು ರಾತ್ರಿ ಸೇರಿ ಎರಡು ಅಥವಾ ಮೂರು ಬಾರಿ ಮಾಡಬಹುದು. ಆದರೆ, ಬೆಂಗಳೂರಿನ ಟೆಕ್ಕಿಯೊಬ್ಬರು ದಿನಕ್ಕೆ 8 ಗಂಟೆ ಸ್ನಾನ ಮಾಡುತ್ತಿದ್ದರಂತೆ!

ನಂಬೋದಕ್ಕೆ ಕಷ್ಟವಾದರೂ ಇದು ನಿಜ. ಬೆಂಗಳೂರಿನಲ್ಲಿ ತಾಯಿಯೊಂದಿಗೆ ನೆಲೆಸಿರುವ 32 ವರ್ಷದ ಟೆಕ್ಕಿ ಕಳೆದ ಐದಾರು ವರ್ಷಗಳಿಂದ ಈ ಬಗೆಯ ಗೀಳು ರೋಗದಿಂದ ಬಳಲುತ್ತಿದ್ದರು. ವರ್ಷದ ಹಿಂದೆ ಯಲಹಂಕದ ಪೀಪಲ್‌ ಟ್ರೀ ಮಾರ್ಗ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಇದೀಗ ಟೆಕ್ಕಿ ಸ್ನಾನದ ಗೀಳಿನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ.

ಈ ಟೆಕ್ಕಿಗೆ ದೇಹದಲ್ಲಿ ಗಲೀಜು ಇದೆ ಎಂದು ಪದೇ ಪದೆ ಬಾತ್‌ ರೂಮ್‌ಗೆ ಹೋಗಿ ಸ್ನಾನಕ್ಕಿಳಿಯುತ್ತಿದ್ದರು. ಪ್ರತಿ ಬಾರಿ ಸ್ನಾನಕ್ಕೂ ಒಂದು ಸೋಪ್‌ ಬೇಕಾಗುತ್ತಿತ್ತು. ಮಗನ ಸ್ನಾನದ ಗೀಳು ಕಂಡು ಪೋಷಕರು ಕಂಗಾಲಾದರು. ಮದುವೆಯಾದ ಆರಂಭದಲ್ಲೇ ಗಂಡನ ಸ್ನಾನದ ಹುಚ್ಚು ಕಂಡು ಹೆಂಡತಿ ಡೈವೋರ್ಸ್‌ ತೆಗೆದುಕೊಂಡು ತವರು ಮನೆ ಸೇರಿದರು.

ಆ ವ್ಯಕ್ತಿಗೆ ಕಚೇರಿಗೆ ಹೋದರೂ ಅಲ್ಲಿಯೂ ಸರಿಯಾಗಿ ಕೆಲಸ ಮಾಡಲಾಗದ ಸ್ಥಿತಿ. ಪದೇ ಪದೆ ಟಾಯ್ಲೆಟ್‌ಗೆ ಹೋಗಿ ಡೆಟಾಲ್‌ ಹಾಕಿಕೊಂಡು ಕೈ ತೊಳೆದುಕೊಳ್ಳುತ್ತಿದ್ದರು. ಕಚೇರಿಯಿಂದ ಮನೆಗೆ ಬಂದರೆ ಸಾಕು ಸ್ನಾನದ ಕೊಠಡಿಯಿಂದ ಹೊರ ಬರುತ್ತಿರಲಿಲ್ಲ. ಪದೇ ಪದೇ ಸ್ನಾನದಿಂದ ಮನೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಮನೆಯಲ್ಲಿ ತಂದಿಟ್ಟ ಸೋಪು ಖಾಲಿಯಾಗುತ್ತಿತ್ತು. ಬಾಕ್ಸ್‌ಗಟ್ಟಲೇ ಸೋಪು ತಂದರೂ ಒಂದೆರಡು ದಿನಗಳಲ್ಲೇ ಮಂಗಮಾಯ. ಈ ಗೀಳು ಕಾಣಿಸಿಕೊಂಡ ಮೊದಲಿಗೆ ಎರಡು ಬಾರಿ ಸ್ನಾನ ಮಾಡುತ್ತಿದ್ದರೆ, ತೀವ್ರತೆ ಹೆಚ್ಚಾದ ಬಳಿಕ ಐದಾರು ಬಾರಿ ಹಾಗೂ ದಿನಕ್ಕೆ ಕನಿಷ್ಠ ಎಂಟು ಗಂಟೆ ಸ್ನಾನ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗೀಳು ಜೋರಾದಾಗ ಮುಂಜಾನೆ 3 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ಹಾಗೂ ಸಂಜೆ 6 ರಿಂದ ರಾತ್ರಿ 10 ಗಂಟೆ ವರೆಗೆ ಸ್ನಾನ ಮಾಡಲು ಆರಂಭಿಸಿದ್ದರು.

ಪ್ಲಾಸ್ಟಿಕ್‌ ಕೈಗವಸು ಬಳಕೆ: ಬೇರೆಯವರು ಮುಟ್ಟಿದ ಬಾಗಿಲನ್ನು ಮುಟ್ಟಲು ಭಯ ಪಡುತ್ತಿದ್ದ ಟೆಕ್ಕಿ, ಕೈಗೆ ಪ್ಲಾಸ್ಟಿಕ್‌ ಗವಸು ಧರಿಸುತ್ತಿದ್ದರು. ಸ್ನಾನಕ್ಕೆಂದು ಶೌಚಾಲಯಕ್ಕೆ ಹೋಗುವಾಗ ಬಾಗಿಲು ಮುಟ್ಟಲು ಒಂದು ಪ್ಲಾಸ್ಟಿಕ್‌, ಶವರ್‌ ಮುಟ್ಟಲು ಮತ್ತೊಂದು ಪ್ಲಾಸ್ಟಿಕ್‌ ಸೇರಿದಂತೆ ಒಂದು ಬಾರಿ ಸ್ನಾನ ಮುಗಿಸುವ ಹೊತ್ತಿಗೆ ಪ್ಲಾಸ್ಟಿಕ್‌ ಕೈ ಗವಸಿನ ರಾಶಿ ಬೀಳುತ್ತಿತ್ತು.

ಗೀಳು ಎಂದರೇನು?
‘ಆಬ್ಸೆಸ್ಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌’ ಅಥವಾ ‘ಗೀಳು’ರೋಗ ಅನುವಂಶಿಕವಾಗಿ ಅಥವಾ ಮಾನಸಿಕ ಒತ್ತಡದಿಂದ ಬರುವ ರೋಗ. ಈ ರೋಗಕ್ಕೊಳಗಾದವರು ಒಂದು ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರಬೇಕೆಂದು ಬಯಸುತ್ತಾರೆ. ಪುಸ್ತಕ ಓದಿ ಮುಗಿಸಿದರೂ ಮತ್ತೆ ಮೊದಲ ಪುಟದಿಂದ ಓದುವುದು, ಬಾಗಿಲಿಗೆ ಬೀಗ ಹಾಕಿರುವುದನ್ನು ಪದೇ ಪದೇ ಖಚಿತಪಡಿಸಿಕೊಳ್ಳುವುದು, ಪದೇ ಪದೆ ಲೆಕ್ಕ ಮಾಡುವುದು ಮೊದಲಾದವು ಇದರ ಕೆಲ ಉದಾಹರಣೆಗಳು.

ಚಿಕಿತ್ಸೆ ಹೇಗೆ?
ಆಪ್ತ ಸಮಾಲೋಚನೆ ಇದಕ್ಕೆ ಸೂಕ್ತ ಚಿಕಿತ್ಸಾ ವಿಧಾನ. ಜತೆಗೆ ಔಷಧವನ್ನು ನೀಡಬೇಕಾಗುತ್ತದೆ. ಸ್ವಚ್ಛತೆಯ ಗೀಳು ಹೊಂದಿದ್ದ ಟೆಕ್ಕಿಗೆ ಇವುಗಳೊಂದಿಗೆ ಕಾಗ್ನಿಟಿವ್‌ ಬಿಹೇವಿಯರ್‌ ಥೆರಪಿ ಮಾಡಲಾಗಿದೆ.

“ಗೀಳು ರೋಗ ಅನುವಂಶಿಕ ಅಥವಾ ಮಾನಸಿಕ ಒತ್ತಡದಿಂದ ಬರುತ್ತದೆ. ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಪಡೆಯುವುದು ಸೂಕ್ತ.”–ಡಾ. ಸತೀಶ್‌ ರಾಮಯ್ಯ ನಿರ್ದೇಶಕ, ಪೀಪಲ್‌ ಟ್ರೀ ಮಾರ್ಗ ಆಸ್ಪತ್ರೆ

Comments are closed.