ಬೆಂಗಳೂರು (ನ. 22): ನಗರದ ಹೊರವಲಯದಲ್ಲಿರುವ ಬಿಡದಿಯಲ್ಲಿ ಆಶ್ರಮ ಕಟ್ಟಿಕೊಂಡು ಅಲ್ಲಿನ ಗುರುಕುಲದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನೂ ನೀಡುತ್ತಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ತಳ್ಳಿಹಾಕಿದ್ದ ಅವರ ಶಿಷ್ಯರು ನಿತ್ಯಾನಂದ ಸ್ವಾಮಿಗಳು ದೀರ್ಘಕಾಲದ ತಪಸ್ಸಿಗಾಗಿ ಉತ್ತರ ಭಾರತಕ್ಕೆ ತೆರಳಿದ್ದಾರೆ ಎಂದು ಹೇಳಿದ್ದರು. ಆದರೀಗ, ವಿವಾದಿತ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಹೋಗಿರುವುದನ್ನು ಗುಜರಾತ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್ನ ಅಹಮದಾಬಾದ್ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್ಗೆ ಶಿಫ್ಟ್ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್ಗೆ ಸ್ಥಳಾಂತರವಾಗಿತ್ತು. ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ನಿತ್ಯಾನಂದ ಸ್ವಾಮಿ ಇತ್ತೀಚೆಗೆ ತಮ್ಮ ಪ್ರವಚನದ ಕೆಲವು ವಿಡಿಯೋ ತುಣುಕುಗಳನ್ನು ಕೂಡ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆ ಯಾವ ವಿಡಿಯೋಗಳೂ ಈಗ ರೆಕಾರ್ಡ್ ಮಾಡಿರುವುದಲ್ಲ. ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಎಂದು ಅಹಮದಾಬಾದ್ ಪೊಲೀಸರು ಹೇಳಿದ್ದಾರೆ.
ಅಹಮದಾಬಾದ್ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮದಲ್ಲಿನ ನಾಲ್ಕು ವಿದ್ಯಾರ್ಥಿಗಳ ಅಪಹರಣ ಹಾಗೂ ಅವರನ್ನು ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದ ವಿರುದ್ಧ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಗತ್ಯ ಬಿದ್ದರೆ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗುವುದು ಎಂದು ಕೂಡ ಪೊಲೀಸರು ತಿಳಿಸಿದ್ದಾರೆ. ನಿತ್ಯಾನಂದ ಸ್ವಾಮಿ ಬಿಡದಿ ನ್ಯಾಯಾಲಯಕ್ಕೂ 6 ತಿಂಗಳಿನಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಚಾರಣೆ ಡಿ. 9ರಂದು ನಡೆಯಲಿದ್ದು, ಆ ವೇಳೆ ಹಾಜರಾದರೆ ಅಹಮದಾಬಾದ್ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದಷ್ಟೆ ನಿತ್ಯಾನಂದ ಆಶ್ರಮದ ಸಿಬ್ಬಂದಿಯ ವಿರುದ್ಧ ನಿತ್ಯಾನಂದನ ಶಿಷ್ಯರೊಬ್ಬರು ಗಂಭೀರ ಆರೋಪ ಮಾಡಿದ್ದರು. ಆಶ್ರಮದ ಗುರುಕುಲದಲ್ಲಿರುವ ತಮ್ಮ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ, ಆಕೆಯನ್ನು ನೋಡಲು ಕೂಡ ಅವಕಾಶ ನೀಡುತ್ತಿಲ್ಲ ಎಂದು ಅಹಮದಾಬಾದ್ ಆಶ್ರಮದ ಮುಂದೆ ಹೇಳಿಕೆ ನೀಡಿದ್ದರು. ನಂತರ ಈ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿತ್ತು.
2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್ಪೋರ್ಟ್ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್ಪಿಯಾಗಿದ್ದ ರಮೇಶ್ ಬಾನೋತ್ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್ ಸಮನ್ಸ್ ನೀಡಿದ ನಂತರವೂ ಕೋರ್ಟ್ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್ಪೋರ್ಟ್ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಅವರು ಗುಜರಾತ್ಗೆ ಹೋಗಿದ್ದರು.
ದೇಶದಿಂದ ಹೇಗೆ ಪರಾರಿ?:
ಮೂಲಗಳ ಪ್ರಕಾರ, ನಿತ್ಯಾನಂದ ದೇಶದಿಂದ ಪರಾರಿಯಾಗಲು ಒಂದೋ ನಕಲಿ ಪಾಸ್ಪೋರ್ಟ್ ಮತ್ತು ಐಡೆಂಟಿಟಿ ಬಳಕೆ ಮಾಡಿರಬೇಕು. ಇಲ್ಲವಾದಲ್ಲಿ ಬೇರೆ ದೇಶದ ಪಾಸ್ಪೋರ್ಟ್ ಪಡೆದು ಭಾರತದಿಂದ ಆಚೆ ಹೋಗಿರಬೇಕು. ಅಥವಾ ರಾಮನಗರ ಪೊಲೀಸರು ನವೀಕರಣಕ್ಕೆ ಅವಕಾಶ ನೀಡದ ನಂತರವೂ ಇನ್ನಾವುದಾದರೂ ಮಾರ್ಗದಿಂದ ಪಾಸ್ಪೋರ್ಟ್ ನವೀಕರಿಸಿಕೊಂಡಿರಬೇಕು.
ಕೇಮ್ಯಾನ್ ದ್ವೀಪದಲ್ಲಿ ನಿತ್ಯಾನಂದ?:
ನಿತ್ಯಾನಂದ ಭಾರತದಲ್ಲೇ ಇಲ್ಲ ಎಂದು ಅಹಮದಾಬಾದ್ ಪೊಲೀಸರು ಹೇಳಿದ್ದಾರೆ. ಒಂದು ವೇಳೆ ದೇಶ ಬಿಟ್ಟಿದ್ದೇ ಆದರೆ ನಿತ್ಯಾನಂದ ಎಲ್ಲಿರಬಹುದು? ಈ ಕುತೂಹಲವನ್ನು ಬೆನ್ನತ್ತಿದ ನ್ಯೂಸ್18ಗೆ ಉನ್ನತ ಮೂಲಗಳಿಂದ ಕೆಲ ಮಾಹಿತಿಗಳು ಲಭ್ಯವಾಗಿವೆ. ಇದರ ಪ್ರಕಾರ ನಿತ್ಯಾನಂದ ಭ್ರಿಟೀಶ್ ಅಧಿಪತ್ಯದಲ್ಲಿರುವ ಪಶ್ಚಿಮ ಕೆರಿಬಿಯನ್ ಮಹಾಸಾಗರದಲ್ಲಿರುವ ಕೇಮ್ಯಾನ್ ದ್ವೀಪದಲ್ಲಿ ನೆಲೆಸಿದ್ದಾರೆ. ಜತೆಗೆ ಅತ್ಯಾಪ್ತ ಶಿಷ್ಯರೂ ಅವರ ಜತೆಯೇ ಇದ್ದಾರೆ. ಅತ್ತ ದೇಶ ಬಿಟ್ಟು ನಿತ್ಯಾನಂದ ಓಡಿ ಹೋಗಿದ್ದರೆ, ಇತ್ತ ಬಿಡದಿ ಆಶ್ರಮದಲ್ಲಿರುವ ಭಕ್ತರ ಕಥೆ ಶೋಚನೀಯವಾಗಿದೆ. ನಿತ್ಯಾನಂದನ ಭಕ್ತರೇ ಹೇಳುವಂತೆ, ಅಲ್ಲಿರುವ ಶಿಷ್ಯರಿಗೆ ಊಟಕ್ಕೂ ಕೊರತೆ ಉಂಟಾಗಿದೆ.
ಇದೀಗ ಅಹಮದಾಬಾದ್ನ ನಿತ್ಯಾನಂದ ಆಶ್ರಮದ ಜಾಗದ ಸುತ್ತಲೂ ವಿವಾದಗಳು ಸುತ್ತಿಕೊಂಡಿದೆ. ಸರ್ಕಾರದ ಅನುಮತಿ ಪಡೆಯದೆ ಆ ಜಾಗವನ್ನು ಡಿಪಿಎಸ್ ಶಾಲೆಯಿಂದ ಗುತ್ತಿಗೆ ಅಥವಾ ಲೀಸ್ಗೆ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಕೇಸು ದಾಖಲಾಗಿದೆ.
Comments are closed.