ಕರ್ನಾಟಕ

ರೋಷನ್ ಬೇಗ್ ಬೇಡವೆನ್ನಲು ಬಿಜೆಪಿ ಕೊಟ್ಟ ಕಾರಣವೇನು ಗೊತ್ತಾ?

Pinterest LinkedIn Tumblr


ಬೆಂಗಳೂರು: ‘ಅನರ್ಹ’ರು ಎಂಬ ಹಣೆಪಟ್ಟಿ ಹೊತ್ತ 17 ಶಾಸಕರ ಪೈಕಿ, ಎಲ್ಲರಿಗಿಂತಾ ಹೆಚ್ಚು ‘ಟೆನ್ಶನ್‌’ನಲ್ಲಿ ಇರೋದು ರೋಷನ್ ಬೇಗ್.! ಈಗ ಅವರು ರಾಜಕೀಯ ನಿರಾಶ್ರಿತರು. ಕಾಂಗ್ರೆಸ್‌ನಿಂದ ದೂರವಾದ ರೋಷನ್‌ ಬೇಗ್, ಈಗ ಬಿಜೆಪಿಗೂ ಬೇಡವಾಗಿದ್ದಾರೆ!

ಗುರುವಾರ ಬೆಳಗ್ಗೆ 10.30ಕ್ಕೆ ಎಲ್ಲಾ ಅನರ್ಹ ಶಾಸಕರು ಬಿಜೆಪಿ ಸೇರಲಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗ, ಎಲ್ಲರ ಗಮನ ಸೆಳೆದಿದ್ದು ರೋಷನ್ ಬೇಗ್! ಯಾಕಂದ್ರೆ, ಬಿಜೆಪಿ ಸೇರಲಿರುವ ಅನರ್ಹರ ಪಟ್ಟಿಯಲ್ಲಿ ರೋಷನ್ ಬೇಗ್ ಹೆಸರು ಇರಲಿಲ್ಲ. ದೋಸ್ತಿ ಸರ್ಕಾರ ವಿಶ್ವಾಸಮತ ಯಾಚನೆ ವೇಳೆ ರಾಜೀನಾಮೆ ನೀಡಿದ 17 ಶಾಸಕರ ಪೈಕಿ ರೋಷನ್ ಬೇಗ್ ಕೂಡಾ ಇದ್ದರು. ಆದ್ರೆ, ಇದೀಗ ಬಿಜೆಪಿ ಸೇರ್ಪಡೆಯಾಗಿದ್ದು 16 ಶಾಸಕರು ಮಾತ್ರ. ರೋಷನ್ ಬೇಗ್ ಬಿಜೆಪಿಗೆ ಸೇರಲು ಅಡ್ಡಿಯಾಗಿದ್ದೇನು ಅನ್ನೋದೇ ಸದ್ಯದ ಚರ್ಚಾ ವಿಚಾರ.

ಮಧ್ಯರಾತ್ರಿ ಮಾತುಕತೆಯೂ ವಿಫಲ..!

ಗುರುವಾರ ಬೆಳಗ್ಗೆ 10.30ಕ್ಕೆ 16 ಅನರ್ಹರು ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ ಕೇಳಿದ್ದೇ ತಡ, 17ನೇ ಶಾಸಕ ರೋಷನ್ ಬೇಗ್‌ ಎದೆಯಲ್ಲಿ ನಡುಕ ಶುರುವಾಗಿತ್ತು. ತಾವು ಬಿಜೆಪಿ ಸೇರಲು ಏಕೆ ಸಾಧ್ಯವಾಗ್ತಿಲ್ಲ ಅನ್ನೋ ಪ್ರಶ್ನೆ ಹೊತ್ತು ಬುಧವಾರ ತಡರಾತ್ರಿಯೇ ಯಡಿಯೂರಪ್ಪ ನಿವಾಸದ ಕದ ತಟ್ಟಿದರು ರೋಷನ್ ಬೇಗ್.

ಶಿವಾಜಿನಗರ ಭಾಗದ ಪ್ರಬಲ ಮುಸ್ಲಿಂ ನಾಯಕ ಎಂದೇ ಹೆಸರಾಗಿರುವ ರೋಷನ್‌ ಬೇಗ್‌ರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳೋದು ಏಕೆ ಸಾಧ್ಯವಿಲ್ಲ ಅನ್ನೋ ವಿಚಾರವನ್ನು ಯಡಿಯೂರಪ್ಪ ಕೂಲಂಕಷವಾಗಿ ವಿವರಿಸಿದರು ಎನ್ನಲಾಗಿದೆ. ಒಂದು ವೇಳೆ ಪಕ್ಷೇತರನಾಗಿ ನಿಂತರೆ ಬೆಂಬಲ ಸಿಗಬಹುದೇ ಎಂದೂ ರೋಷನ್ ಬೇಗ್‌ ಪ್ರಶ್ನಿಸಿದ್ಧಾರೆ ಎಂದು ತಿಳಿದುಬಂದಿದೆ. ಅಂತಿಮವಾಗಿ ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ನೋ ಎಂಬ ಉತ್ತರ ಸಿಕ್ಕಿದೆ.

ರೋಷನ್‌ ಬೇಗ್‌ ಬೇಡ ಎಂದಿದ್ದೇಕೆ ಬಿಜೆಪಿ..?

ರೋಷನ್ ಬೇಗ್ ಸೇರ್ಪಡೆಯಿಂದ ಬಿಜೆಪಿಗೆ ಬೆಂಗಳೂರಿನ ಮುಸ್ಲಿಂ ನಾಯಕನೊಬ್ಬ ಸಿಕ್ಕುವ ಅವಕಾಶ ಇತ್ತಾದರೂ ಐಎಂಎ ಹಗರಣ, ರೋಷನ್‌ ಬೇಗ್‌ಗೆ ಮಗ್ಗುಲ ಮುಳ್ಳಾಗಿದೆ. ರೋಷನ್‌ ಬೇಗ್‌ರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ ಕಳಂಕಿತ ವ್ಯಕ್ತಿಯನ್ನು ಪಕ್ಷಕ್ಕೆ ಬರಮಾಡಿಕೊಂಡ ಆರೋಪ ಎದುರಾಗುತ್ತೆ ಅನ್ನೋದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

ರೋಷನ್ ಬೇಗ್‌ ಬಿಜೆಪಿ ಸೇರ್ಪಡೆಗೆ ಇನ್ನೊಂದು ಪ್ರಬಲ ಕಾರಣವಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ನಾಯಕರ ಹತ್ಯಾ ಸರಣಿಯಾದಾಗ ರೋಷನ್ ಬೇಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ, ರೋಷನ್ ಬೇಗ್‌ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ತುತ್ತಾಗಿದ್ದರು.

ಇದೀಗ ರೋಷನ್ ಬೇಗ್ ಬಿಜೆಪಿಗೆ ಸೇರಿಸಿಕೊಳ್ಳದಿದ್ದರೂ ಪರವಾಗಿಲ್ಲ, ಪಕ್ಷೇತರನಾಗಿ ನಿಲ್ಲುವೆ ಬೆಂಬಲಿಸಿ ಎನ್ನುತ್ತಿದ್ಧಾರೆ. ಆದ್ರೆ, ಶಿವಾಜಿನಗರ ಭಾಗದಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಬೆಂಬಲಿಗರ ಪ್ರಾಬಲ್ಯವಿದೆ. ದಶಕಗಳಿಂದ ಬೇಗ್‌ ವಿರುದ್ಧ ಸೆಣಸುತ್ತಿರುವ ಕಟ್ಟಾ ಟೀಂ ಇದೀಗ ಪಕ್ಷೇತರನಾಗಿ ನಿಲ್ಲುವ ರೋಷನ್‌ ಬೇಗ್‌ಗೆ ಬೆಂಬಲ ನೀಡುತ್ತಾ ಅನ್ನೋದೇ ಪ್ರಶ್ನೆ. ಅದೇನೇ ಇರಲಿ, ಅನರ್ಹ ಅನ್ನೋ ಕಳಂಕ ತೊಳೆದುಕೊಳ್ಳೋಕೆ ರೋಷನ್ ಬೇಗ್‌ ಹರಸಾಹಸವನ್ನೇ ನಡೆಸಬೇಕಿದೆ. ಬಿಜೆಪಿಗೆ ರೋಷನ್ ಬೇಗ್ ಅಗತ್ಯ ಎನ್ನೋದಕ್ಕಿಂತಾ ಹೆಚ್ಚಾಗಿ ಈಗ ರೋಷನ್ ಬೇಗ್‌ಗೆ ಬಿಜೆಪಿಗೆ ಅಗತ್ಯ ಹೆಚ್ಚಾಗಿದೆ.

Comments are closed.