ಕರ್ನಾಟಕ

ನಕಲಿ ಹೆಸರಲ್ಲಿ ರೈತರ 17.92 ಕೋಟಿ ಸಾಲ ಮನ್ನಾ!

Pinterest LinkedIn Tumblr


ಕಲಬುರಗಿ: ಸರ್ಕಾರ ಘೋಷಿಸಿದ ಬೆಳೆ ಸಾಲ ಮನ್ನಾದಲ್ಲಿ ಸಾಲ ಪಡೆಯದೇ ಇರುವ ರೈತರ ಹೆಸರು ಸೇರಿಸಿ ಸಾಲ ಮನ್ನಾ ಹಣ ಪಡೆದು ರೈತರಿಗೆ ಹಾಗೂ ಸರ್ಕಾರಕ್ಕೆ ವಂಚಿಸಿದ ಪ್ರಕರಣ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಿಸಲಾಗಿದ್ದ 50 ಸಾವಿರ ರೂ. ಬೆಳೆ ಸಾಲ ಮನ್ನಾದಲ್ಲೇ ಅಪರಾ-ತಪರಾ ಎಸಗಿರುವ ಪ್ರಕರಣ ನಡೆದಿದೆ ಎಂದು ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖೆ ಕಾರ್ಯದರ್ಶಿಗಳಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ (ಡಿಸಿಸಿ)ಬ್ಯಾಂಕ್‌ನಲ್ಲಿ 17,785 ರೈತರಿಗೆ ಬೆಳೆ ಸಾಲ ವಿತರಿಸದಿದ್ದರೂ ಸಾಲ ವಿತರಿಸಲಾಗಿದೆ ಎಂದು ತೋರಿಸಿ ಸುಮಾರು 17.92 ಕೋಟಿ ರೂ. ವಂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಂಡು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖಾ ಕಾರ್ಯದರ್ಶಿಗಳಿಗೆ ವಿವರವಾದ ವರದಿ ಸಲ್ಲಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ನಲ್ಲಿ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು ಸೇರಿ ಹೊಸ ರೈತರ ಹೆಸರಿನಲ್ಲಿ ಸಾಲ ಹಂಚಲಾಗಿದೆ ಎಂದು 2017ರಲ್ಲಿ ಅಪೆಕ್ಸ್‌ ಬ್ಯಾಂಕ್‌ಗೆ ತಪ್ಪು ಮಾಹಿತಿ ನೀಡಿ ಸುಮಾರು 28 ಕೋಟಿ ರೂ. ಪಡೆದು ಅದನ್ನು ಸರ್ಕಾರ ಘೋಷಿಸಿದ ಸಾಲ ಮನ್ನಾದ ಕ್ಲೇಮ್‌(29 ಕಾಲಂಗಳ)ನಲ್ಲಿ ತೋರಿಸಿ ಅವ್ಯವಹಾರ ಎಸಗಲಾಗಿದೆ.

ಇಲ್ಲದ ರೈತರ ಹೆಸರಿನಲ್ಲಿ ಕ್ಲೇಮ್‌ ಮಾಡಿರುವುದನ್ನು ಡಿಸಿಸಿ ಬ್ಯಾಂಕ್‌ನ ಆಗಿನ ವ್ಯವಸ್ಥಾಪಕರು ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಬ್ಯಾಂಕ್‌ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎನ್ನುವರು ತಮ್ಮ ಕರ್ತವ್ಯ ನಿರ್ವಹಿಸಲು ವಿಫ‌ಲರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆದ್ದರಿಂದ ಈ ಅಧಿಕಾರಿ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ 1957ರ ಅಡಿಯಲ್ಲಿ ಶಿಸ್ತು ಕ್ರಮ ಕಾಯ್ದಿರಿಸಿ, ಬ್ಯಾಂಕ್‌ನಲ್ಲಿ ನಡೆದ ಸಾಲ ಮನ್ನಾದ ಅಪರಾ-ತಪರಾ ಕುರಿತಾಗಿ ಪರಿಶೀಲನಾ ಸಮಿತಿ ವರದಿ ನೀಡುವವರೆಗೂ ಅಮಾನತ್ತಿನಲ್ಲಿಡುವುದು ಸೂಕ್ತ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ತನಿಖೆ-ಅಮಾನತಿಗೆ ಹಿಂದೇಟು: ಸಾಲ ಮನ್ನಾದಲ್ಲಿ ಕೋಟ್ಯಂತರ ರೂ. ಮೊತ್ತದ ವಂಚನೆ ಪ್ರಕರಣ ನಡೆದಿದೆ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕರ ಮಾಹಿತಿ ಮೇರೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಸಮಗ್ರ ವಿವರಣೆಯೊಂದಿಗೆ ಸಹಕಾರ ಇಲಾಖೆ ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ಸಲ್ಲಿಕೆಯಾದ ವರದಿ ಧೂಳು ತಿನ್ನುತ್ತಿದೆ. ವಿಪರ್ಯಾಸದ ಸಂಗತಿ ಎಂದರೆ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕರಾಗಿದ್ದ ಗೋಪಾಲ ಅವರಿಗೆ ಬಡ್ತಿಯಾಗಿ ಈಗ ಸಹಕಾರ ಸಂಘಗಳ ಜಂಟಿ ನಿಬಂಧಕರಾಗಿದ್ದಾರೆ.

ಅಕ್ರಮದ ಬಗ್ಗೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ವರದಿ ಯಾವ ಮಟ್ಟಿದಲ್ಲಿದೆ ಎಂಬುದನ್ನು ಪರಿಶೀಲಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಪ್ರಸನ್ನಕುಮಾರ, ಸಹಕಾರ ಸಂಘಗಳ ನಿಬಂಧಕರು

Comments are closed.