ಕರ್ನಾಟಕ

ಮಾಜಿ ಸಚಿವ ಬಾಬುರಾವ್ ಚಿಂಚನಸೂರಗೆ ಕೊಟ್ಟ 11 ಕೋಟಿ ಹಿಂದಿರುಗಿಸದಕ್ಕೆ ಆತ್ಮಹತ್ಯೆ ಮಾಡಿಕೊಂಡಳು; ಅಂಜನಾ ತಾಯಿ

Pinterest LinkedIn Tumblr

ಬೆಂಗಳೂರು(ನ. 04): ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಬಾಬುರಾವ್ ಚಿಂಚನಸೂರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ಅಂಜನಾ ವಿ. ಶಾಂತವೀರ ನಾಲ್ಕು ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನ ತಡವಾಗಿ ಮಾಧ್ಯಮಗಳಿಗೆ ಗೊತ್ತಾದ ಈ ಘಟನೆ ಸಾಕಷ್ಟು ತಲ್ಲಣಗೊಳಿಸಿದೆ. ಈಗ ಬಿಜೆಪಿಯಲ್ಲಿರುವ ಬಾಬುರಾವ್ ಚಿಂಚನಸೂರ ಅವರು ಈ ಪ್ರಕರಣ ಬೆಳಕಿಗೆ ಬರುತ್ತಲೇ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ಧಾರೆ.

ಇದೇ ವೇಳೆ, ಅಂಜನಾ ಶಾಂತವೀರ ಅವರ ತಾಯಿ ಅರ್ಚನಾ ಅವರು ಮಾತನಾಡಿ ಒಂದಷ್ಟು ವಿಚಾರ ಮತ್ತು ನೋವುಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಮಗಳ ಸಾವಿಗೆ ಬಾಬುರಾವ್ ಅವರೇ ಕಾರಣ ಎಂದು ಆರೋಪಿಸುವ ಅರ್ಚನಾ ಅವರು, ತಮ್ಮ ಮಗಳು ಬಹಳ ಚಿತ್ರಹಿಂಸೆ ಅನುಭವಿಸಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.

ಅಂಜನಾ ವಿ. ಶಾಂತವೀರ ಅವರು ಕೆಲವಾರು ವರ್ಷಗಳ ಹಿಂದೆ ಬಾಬುರಾವ್ ಚಿಂಚನಸೂರ ಅವರಿಗೆ 11.8 ಕೋಟಿ ರೂ ಹಣ ನೀಡಿರುತ್ತಾರೆ. ಈ ಹಣ ತನಗೆ ವಾಪಸ್ ಬಂದಿಲ್ಲ. ಬಾಬುರಾವ್ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿದ್ದ ಅಂಜನಾ ಅವರು ಚೆಕ್ ಬೌನ್ಸ್ ಪ್ರಕರಣವನ್ನೂ ದಾಖಲಿಸಿರುತ್ತಾರೆ. ಆದರೆ, ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ವಿಳಂಬವಾಗುತ್ತಾ ಬಂದಿರುತ್ತದೆ. ಇದರಿಂದ ಹತಾಶೆಗೊಂಡ ಅಂಜನಾ ಅವರು ಅ. 31ರಂದು ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮರುದಿನ ಬೆಳಗ್ಗೆಯೇ ಅವರ ಅಂತ್ಯಕ್ರಿಯೆ ನಡೆದುಹೋಗಿರುತ್ತದೆ. ಮಾಧ್ಯಮಗಳಿಗೆ ಈ ಸುದ್ದಿ ಗೊತ್ತಾಗಿದ್ದೇ ನ. 2ರಂದು.

ಬಾಬುರಾವ್ ಅವರಿಗೆ ಅಂಜನಾ ಅಷ್ಟು ಹಣ ಕೊಡಲು ಏನು ಕಾರಣ? ಅವರ ತಾಯಿ ಅರ್ಚನಾ ಅವರು ಈ ಬಗ್ಗೆ ಮಾಹಿತಿ ನೀಡಿದ್ಧಾರೆ. ಬಡ್ಡಿ ಹಣದ ನಿರೀಕ್ಷೆಯಲ್ಲಿ ತಮ್ಮ ಮಗಳು ಮೋಸ ಹೋದಳೆಂದು ಈ ತಾಯಿ ನೊಂದು ಹೇಳಿದ್ದಾರೆ. ಬಾಬುರಾವ್ ಅವರು ಹೆಚ್ಚು ಬಡ್ಡಿಯ ಆಸೆ ತೋರಿಸಿದ್ದರು. ತಮ್ಮ ಮಗಳು ಅವರ ಮಾತು ನಂಬಿ ವಿವಿಧ ಬ್ಯಾಂಕುಗಳಲ್ಲಿ, ವಿವಿಧ ಖಾತೆಗಳಲ್ಲಿ ಸಾಲಗಳನ್ನು ಪಡೆದು ಹಣ ಹೊಂದಿಸಿ ಅವರಿಗೆ ನೀಡಿದ್ದಳು ಎಂದು ಅರ್ಚನಾ ತಿಳಿಸಿದ್ದಾರೆ.

ಇದನ್ನೂ ಓದಿ: ಮುಕ್ತ ವ್ಯಾಪಾರ ಒಪ್ಪಂದ ಕೈ ಬಿಡುವಂತೆ ಒತ್ತಾಯಿಸಿ ರೈತರು ಮತ್ತು ಕಾಂಗ್ರೆಸ್​ನಿಂದ ರಾಜ್ಯಾದ್ಯಂತ ಪ್ರತಿಭಟನೆ

“ನನ್ನ ಮಗಳು ಕೋರ್ಟ್​ಗೆ ಹೋಗಿ ಬಂದಾಗ ಬಾಬುರಾವ್ ಕಡೆಯವರು ತುಂಬಾ ಹಿಂಸೆ ಕೊಟ್ಟರು. ಈ ಕೇಸ್ ಗೆಲ್ಲಕ್ಕಾಗಲ್ಲ ಮಮ್ಮಿ, ಎಲ್ರೂ ಮೋಸ ಮಾಡ್ತಾ ಇದ್ದಾರೆ. ನಾನು ಬದಕಲ್ಲ, ಸಾಯ್ತೀನಿ. ನಂಗೆ ತುಂಬಾ ಜನ ದುಡ್ಡು ಕೊಡಬೇಕು. ಯಾರೂ ಕೊಡೊಲ್ಲರು. ನನಗೆ ಸಾಕಾಗಿದೆ. ಸತ್ತು ಹೋಗ್ತೀನಿ ಅಂತ ನನ್ನ ತೊಡೆ ಮೇಲೆ ಮಲಕ್ಕೊಂಡು ಅತ್ತಳು. ಹೆದರಿಕೊಳ್ಳಬೇಡಮ್ಮ, ದೇವರಿದ್ದಾನೆ ಅಂತ ಸಮಾಧಾನ ಮಾಡಿದೆ” ಎಂದು ನೋವಿನಿಂದ ಅರ್ಚನಾ ವಿವರಿಸಿದ್ದಾರೆ.

ಆತ್ಮಹತ್ಯೆಗೆ ಮುನ್ನಾ ನಡೆದ ಮಾತುಕತೆ:

“ಆ ದಿನ ನನ್ನ ಜೊತೆ ಫೋನ್ ಮಾಡಿ ಮಾತಾಡಿದ್ಳು. ನಾನು ಒಂದು ಊಟಕ್ಕೆ ಹೇಳಿದೆ. ಊಟ ತರಿಸಿಕೊಟ್ಲು. ಅದನ್ನು ಕೊಟ್ಟುಬಿಟ್ಟು, ಮಮ್ಮಿ ಇದೇ ಕೊನೆ ಊಟ ನನ್ನ ಕೈಯಿಂದ. ಇನ್ಯಾವತ್ತು ನನ್ನಿಂದ ನಿನಗೆ ಊಟ ಸಿಕ್ಕಲ್ಲ ಅಂತ ಅಂದ್ಲು. ಆಗಲೇ ನಂಗೆ ತುಂಬಾ ನೋವಾಯಿತು. ರಾತ್ರಿ 9ಗಂಟೆಗೆ ರೂಮಿನ ಬಾಗಿಲು ಹಾಕಿಕೊಂಡವಳು ತೆಗೆಯಲೇ ಇಲ್ಲ. ಹತ್ತೂವರೆಗೆ ಆಕೆ ನೇಣು ಹಾಕಿಕೊಂಡಿದ್ದು ಗೊತ್ತಾಯಿತು. ಇವರೆಲ್ಲರೂ(ಮನೆಯವರು) ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ್ರು. ಮನೆಯಲ್ಲೇ ಆಕೆಯ ಪ್ರಾಣ ಹೋಗಿತ್ತು. ಆಸ್ಪತ್ರೆಯಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೊದ್ರು. ನಂಗೆ ಒಂದೂ ಮಾತು ಹೇಳಲಿಲ್ಲ” ಎಂದು ಗದ್ದಿತರಾದು ಆ ತಾಯಿ.

ಈ ಚೆಕ್​ಬೌನ್ಸ್ ಕೇಸ್​ನಲ್ಲಿ ಬಾಬು ರಾವ್ ಚಿಂಚನಸೂರ ಅವರು ಜಾಮೀನು ಪಡೆದುಕೊಂಡಿದ್ದಾರೆ. ಅಂಜನಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ಮಾಜಿ ಸಚಿವರು ಕಣ್ಮರೆಯಲ್ಲಿದ್ದಾರೆ.

Comments are closed.