ಕರ್ನಾಟಕ

ದೇಶದ ಗಡಿ ರಕ್ಷಣೆಗೆ ರಾಜ್ಯದ ಅಷ್ಟನಾರಿಯರು ಆಯ್ಕೆ

Pinterest LinkedIn Tumblr


ಧಾರವಾಡ/ಬೆಳಗಾವಿ: ಗಡಿ ಕಾಯುವ ಕಾಯಕ ಕೇವಲ ಪುರುಷರಿಗಷ್ಟೇ ಸೀಮಿತವಾಗಿದ್ದ ಭಾರತೀಯ ಸೇನೆಯಲ್ಲಿ ಈಗ ಕೆಚ್ಚೆದೆಯ ಯುವತಿಯರೂ ಸೇರಿಕೊಂಡಿದ್ದಾರೆ. ದೇಶದ ಮೊದಲ ಮಹಿಳಾ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಬೆಳಗಾವಿ ಜಿಲ್ಲೆಯ 7 ಹಾಗೂ ಧಾರವಾಡ ಜಿಲ್ಲೆಯ ಯುವತಿ ಸಹಿತ ಕರ್ನಾಟಕದ 8 ನಾರಿಯರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಭಾರತೀಯ ಸೇನೆಯಲ್ಲಿ ಜನರಲ್‌ ಡ್ನೂಟಿ ಹುದ್ದೆಗೆ ನೂರು ಮಂದಿಯನ್ನು ಭರ್ತಿ ಮಾಡಲು ನಿರ್ಧರಿಸ ಲಾಗಿತ್ತು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಸಹಿತ 5 ರಾಜ್ಯಗಳನ್ನು ಸೇರಿಸಿ ದಕ್ಷಿಣ ಭಾರತಕ್ಕೆ 20 ಹುದ್ದೆ ನಿಗದಿಗೊಳಿಸಿತ್ತು. ಕರ್ನಾಟಕದಲ್ಲಿ ಬೆಳಗಾವಿ, ರಾಯಚೂರು ಹಾಗೂ ಮಂಗಳೂರಿನಲ್ಲಿ ದೈಹಿಕ, ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಬೆಳಗಾವಿ ವಿಭಾಗದಲ್ಲಿ 7 ಹಾಗೂ ಮಂಗಳೂರು ವಿಭಾಗದಲ್ಲಿ ಓರ್ವ ಯುವತಿ ಆಯ್ಕೆಯಾಗಿದ್ದಾರೆ.

ಆಯ್ಕೆಯಾದವರು ಯಾರ್ಯಾರು?
ಬೆಳಗಾವಿ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಜ್ಯೋತಿ ಬಸಪ್ಪ ಚೌಲಗಿ, ಆರತಿ ತಳವಾರ, ಸ್ಮಿತಾ ಪಾಟೀಲ, ಭಾಗ್ಯಶ್ರೀ ಸಂಭಾಜಿ ಬಡಿಗೇರ, ರಾಘವೇಣಿ ಪಾತೆ, ಸಂಗೀತಾ ಕೋಳಿ, ಜ್ಯೋತಿ ಎಂ. ಹಂಚಿನಮನಿ ಹಾಗೂ ಮಂಗಳೂರು ವಿಭಾಗದಲ್ಲಿ ಧಾರವಾಡ ಜಿಲ್ಲೆ ಮದಿಕೊಪ್ಪ ಗ್ರಾಮದ ಭೀಮಕ್ಕಾ ಚವ್ಹಾಣ ಅವರು ಆಯ್ಕೆಯಾಗಿದ್ದಾರೆ.

8.5 ಲಕ್ಷ ಅರ್ಜಿಗಳು ಬಂದಿದ್ದವು!
ಮಹಿಳಾ ಸೇನಾ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. 8.5 ಲಕ್ಷ ಮಹಿಳೆ ಯರು ಅರ್ಜಿ ಸಲ್ಲಿಸಿದ್ದರು.

ದಕ್ಷಿಣ ಭಾರತಕ್ಕೆ 20 ಹುದ್ದೆ ಗಳನ್ನು ನಿಗದಿಗೊಳಿಸಿ ಶೇ.86ಕ್ಕಿಂತ ಹೆಚ್ಚು ಅಂಕ ಪಡೆದ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸ ಲಾಗಿತ್ತು. ಇದರಲ್ಲಿ ಆಯ್ಕೆಯಾದವರಿಗೆ ಬೆಳಗಾವಿ, ರಾಯಚೂರು, ಮಂಗಳೂರಿನಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಏರ್ಪಡಿಸಲಾಗಿತ್ತು. ಇದರಲ್ಲಿ ಆಯ್ಕೆಯಾಗಿದ್ದ 175 ಮಹಿಳೆಯರ ಪೈಕಿ ಎನ್‌ಸಿಸಿ “ಸಿ’ ಪ್ರಮಾಣಪತ್ರ ಹೊಂದಿದ್ದ 12 ಜನರನ್ನು ಹೊರತುಪಡಿಸಿ ಉಳಿದವರು ಅಂತಿಮ ಪರೀಕ್ಷೆ ಬರೆದಿದ್ದರು. ಫಲಿತಾಂಶ ರವಿವಾರ ಪ್ರಕಟ ಗೊಂಡಿದ್ದು, 8 ಯುವತಿಯರು ಪಾಸಾಗಿ ಸೇನೆ ಸೇರಲು ಅರ್ಹತೆ ಪಡೆದಿದ್ದಾರೆ. ಮಂಗಳೂರು ವಿಭಾಗ ದಿಂದ ಭೀಮಕ್ಕ ಚವ್ಹಾಣ ಮಾತ್ರ ಆಯ್ಕೆ ಯಾಗಿದ್ದಾರೆ.

ಬೆಂಗಳೂರಿನಲ್ಲಿ ತರಬೇತಿ
ರ‍್ಯಾಲಿಯ ಮೂಲಕ ಆಯ್ಕೆಯಾಗಿರುವ ಮಹಿಳೆಯರಿಗೆ ಬೆಂಗಳೂರಿ ನಲ್ಲಿ ಸೇನಾ ತರಬೇತಿ ನೀಡಲಾಗುತ್ತದೆ. ಬಳಿಕ ಗಡಿ ಕಾಯುವ ಹಾಗೂ ಇತರ ಸೇನಾ ಕಾರ್ಯಗಳಿಗೆ ನಿಯೋಜಿಸಲಾಗುತ್ತದೆ. ಗಗನದಲ್ಲೂ ಹೆಜ್ಜೆ ಗುರುತು ಮೂಡಿಸಿರುವ ನಾರಿಯರು ಈಗ ದೇಶದ ಗಡಿಯಲ್ಲೂ ಬಂದೂಕು ಹಿಡಿದು ವೈರಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.

ನಮ್ಮದು ಬಡ ಕುಟುಂಬ. ಮನೆಯಲ್ಲಿ ಪೋಷಕ ರೊಂದಿಗೆ ಮಾಡಿದ ಕಷ್ಟದ ಕೆಲಸಗಳೇ ದೈಹಿಕ ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿತು. ಇನ್ನೊಂದಿಷ್ಟು ಕಷ್ಟಪಟ್ಟು ಓದಿದ ಪರಿಣಾಮ ಪರೀಕ್ಷೆ ಯಲ್ಲೂ ಪಾಸಾದೆ.
– ಭೀಮಕ್ಕ ಚವ್ಹಾಣ,
ಸೇನೆಗೆ ಆಯ್ಕೆಯಾದ ಯುವತಿ

2 ತಿಂಗಳು ಅಷ್ಟೇ ನಾವು ತರಬೇತಿ ನೀಡಿದ್ದೇವೆ. ಆ ಅವಧಿಯಲ್ಲಿ ಪರಿಪಕ್ವವಾಗಿದ್ದ ಭೀಮಕ್ಕ ಕಷ್ಟಪಟ್ಟು ಸೇನೆಗೆ ಆಯ್ಕೆ ಆಗಿದ್ದು ಖುಷಿ ಆಗಿದೆ. ಚೆನ್ನಮ್ಮಳ ಕಿತ್ತೂರಿನಲ್ಲಿ ತರಬೇತಿ ಪಡೆದು ಆಯ್ಕೆಯಾದ ಭೀಮಕ್ಕ ಈಗ ದೇಶ ಸೇವೆಗೆ ಮುಂದಾಗಿರುವುದು ಹೆಮ್ಮೆ.
– ಪರ್ವೇಜ್‌ ಹವಾಲ್ದಾರ್‌, ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಮುಖ್ಯಸ್ಥ

Comments are closed.