ಕರ್ನಾಟಕ

ಹನಿಟ್ರ್ಯಾಪ್ ನಡೆಸುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ

Pinterest LinkedIn Tumblr


ಬೆಳಗಾವಿ: ಉದ್ಯಮಿಗಳು, ಹಣವಂತರನ್ನೇ ಗುರಿಯಾಗಿಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಒಬ್ಬ ಮಹಿಳೆ, ನಕಲಿ ಪತ್ರಕರ್ತ ಸೇರಿ ಆರು ಜನರ ಗ್ಯಾಂಗ್ ಅನ್ನು ಗೋಕಾಕ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಗೋಕಾಕ ತಾಲೂಕಿನ ಶಿಂಗಳಾಪುರ ಗ್ರಾಮದ ಲಕ್ಷ್ಮಿ ಅಲಿಯಾಸ್ ಸರಸ್ವತಿ ಚಿಗಡೊಳ್ಳಿ (28), ಗಂಗಪ್ಪ ಅಲಿಯಾಸ್ ಗಂಗಾಧರ ಹರಿಜನ (25), ಸಂಗಮನಗರದ ರಮೇಶ ಮಾಂವಕರ (28), ಬೆಣಚಿನಮರಡಿಯ ಶ್ರೀಕಾಂತ ಗಢಾರ್ (30), ಬಸವರಾಜ ಗುಂಡಿ, ಜೋಡಟ್ಟಿ ಪ್ಲಾಟ್ ನ ಮಹೇಶ ಅಲಿಯಾಸ್ ಕುಮಾರ ಬೆಳಗಾಂವಕರ (35), ಲಕ್ಷ್ಮಣ ಅಲಿಯಾಸ್ ಲಗಮಣ್ಣ ಕಬ್ಬೂರ (23), ಹುಕ್ಕೇರಿ ತಾಲೂಕಿನ ಕಡಹಟ್ಟಿ ಗ್ರಾಮದ ವಿಠ್ಠಲ‌ ನಾಯಿಕ (27) ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ ಆರು ಜನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್ ನ ಬಂಧನದ ವಿಷಯ ಹೊರಬೀಳುತ್ತಿದ್ದಂತೆ ಅವರಿಂದ ಮೋಸಹೋದ ಹಲವರು ಪೊಲೀಸರನ್ನು ಸಂಪರ್ಕಿಸಲು ಶುರುಮಾಡಿದ್ದಾರೆ. ಈ ಗ್ಯಾಂಗ್ ಗೋಕಾಕ, ಹುಕ್ಕೇರಿ, ಬೆಳಗಾವಿ ಸೇರಿ ವಿವಿಧ ನಗರ, ಪಟ್ಟಣಗಳಲ್ಲಿ ಹನಿಟ್ರ್ಯಾಪ್ ನಡೆಸಿ ಲಕ್ಷಾಂತರ ಹಣ ದೋಚಿದೆ. ಹಲವು ದಿನಗಳಿಂದ ಈ ದಂಧೆ ನಡೆಸಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಹಣವಂತರು, ಉದ್ಯಮಿಗಳನ್ನು ಟಾರ್ಗೆಟ್ ಮಾಡುವ ಈ ಗ್ಯಾಂಗ್ ಮಹಿಳಾ ಆರೋಪಿ ಮೂಲಕ ಅವರನ್ನು ಕೋಣೆಗೆ ಕರೆಸಿಕೊಳ್ಳುತ್ತದೆ. ಕೊಠಡಿಯೊಳಗೆ ಬರುತ್ತಿದ್ದಂತೆ ಆರೋಪಿಗಳು ಅವರ ಮೇಲೆ ದಾಳಿ ಮಾಡಿ ಹಣ, ಚಿನ್ನ ದೋಚುತ್ತಾರೆ. ಅಲ್ಲದೆ, ಬಟ್ಟೆ ಬಿಚ್ಚಿಸಿ ಮಹಿಳೆ ಜತೆ ಅರೆ ನಗ್ನ ದೃಶ್ಯ ಸೆರೆ ಹಿಡಿಯುತ್ತಾರೆ.

ಅದರಲ್ಲಿ ಮಹೇಶ ಎನ್ನುವ ಆರೋಪಿ ಬಿಗ್ ಬ್ರೇಕಿಂಗ್ ನ್ಯೂಸ್ ರಿಪೋರ್ಟರ್ ಎಂದು ಹೇಳಿಕೊಂಡು ಸಂತ್ರಸ್ತರಿಂದ ನಿರಂತರವಾಗಿ ಹಣ ವಸೂಲಿ ಮಾಡುತ್ತಿದ್ದ ಎಂದು ಪ್ರಾಥಮಿಕ‌ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬಯಲಾಗಿದ್ದು ಹೇಗೆ?
ಈ ಗ್ಯಾಂಗ್ ಮೋಸಕ್ಕೆ ಬೆಲ್ಲದ ಬಾಗೇವಾಡಿಯ ಬಟ್ಟೆ ವ್ಯಾಪಾರಿಯೊಬ್ಬರು ಒಳಗಾಗಿದ್ದರು. ಮರ್ಯಾದೆಗೆ ಹೆದರಿ ಅವರು ಗ್ಯಾಂಗ್ ಕೇಳಿದಾಗಲೆಲ್ಲ ಹಣ ಕೊಟ್ಟು ಬೇಸತ್ತಿದ್ದರು. ಅಲ್ಲದೆ ಗ್ಯಾಂಗ್ ಉಪಟಳ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದರು. ಅದೇ ವೇಳೆ ಅವರ ಸ್ನೇಹಿತನೊಬ್ಬ ಬಂದು ರಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಪೊಲೀಸರು ಹೊಂಚು ಹಾಕಿ ಕತರ್ನಾಕ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.

Comments are closed.