ಕರ್ನಾಟಕ

 ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ದಾಖಲು : ಡೇಂಘಿ ಅಥವಾ ಚಿಕೂನ್‍ಗುನ್ಯಾ ಇರುವ ಶಂಕೆ?

Pinterest LinkedIn Tumblr

ಬೆಂಗಳೂರು: ಸಣ್ಣ ಪ್ರಮಾಣದ ಜ್ವರ ಹಾಗೂ ಬೆನ್ನು ನೋವಿನಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ನಿನ್ನೆ ರಾತ್ರಿಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ರಕ್ತದಲ್ಲಿನ ಪ್ಲೆಟ್ಲೆಟ್ಸ್ ಕಣಗಳ ಸಂಖ್ಯೆ 88 ಸಾವಿರ ಇದ್ದು, ಸಾಮಾನ್ಯವಾಗಿ ಅದು 1.5 ಲಕ್ಷ ಇರಬೇಕು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಡೇಂಘಿ ಜ್ವರ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಇಂದು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ನಗರದ ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆ ವೈದ್ಯ ಡಾ.ಶಂಕರ್ ಅವರು ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ತಿಹಾರ್ ಜೈಲಿನಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿತ್ತು. ಬಹುಶಃ ಅಲ್ಲಿಂದ ಡೇಂಘಿ ಅಥವಾ ಚಿಕೂನ್‍ಗುನ್ಯಾ ಸಾಂಕ್ರಾಮಿಕ ರೋಗಗಳು ತಗುಲಿರಬಹುದು ಎಂದು ಅಂದಾಜಿಸಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ.

ಡಿ.ಕೆ.ಶಿವಕುಮಾರ್ ಮಧುಮೇಹಿಯಾಗಿದ್ದರೂ ಅವರ ರಕ್ತದಲ್ಲಿನ ಸಕ್ಕರೆ ಅಂಶ ಸಮಪ್ರಮಾಣದಲ್ಲಿದೆ. ಬೆನ್ನು ನೋವಿನಿಂದ ತೀವ್ರವಾಗಿ ಬಳಲುತ್ತಿರುವ ಅವರಿಗೆ ಒಂದಷ್ಟು ದಿನಗಳ ಕಾಲ ವಿಶ್ರಾಂತಿ ನೀಡಲು ವೈದ್ಯರು ಸಲಹೆ ನೀಡಿದ್ದಾರೆ. ಬಿ-12 ವಿಟಮಿನ್‍ನ ಕೊರತೆ ಸೇರಿದಂತೆ ಹಲವಾರು ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ.

ಜೊತೆಗೆ ನಿನ್ನೆ ರಾತ್ರಿಯಿಂದ ಜ್ವರ ಹಾಗೂ ಮೈ-ಕೈ ನೋವು ಅವರನ್ನು ಹೈರಾಣು ಮಾಡಿವೆ. ಹೀಗಾಗಿ ಒಂದೆರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದು, ತಮ್ಮ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸ್ನೇಹಿತರು ಆಸ್ಪತ್ರೆಯ ಮುಂದೆ ಜಮಾಯಿಸಿ ಗದ್ದಲ ಮಾಡದಂತೆ ಮನವಿ ಮಾಡಿದ್ದಾರೆ.

Comments are closed.