ಕರ್ನಾಟಕ

ಪ್ರೇಮ ಪ್ರಕರಣಕ್ಕೆ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ ಮತ್ತು ಪೋಷಕರಿಬ್ಬರು ಬಲಿ

Pinterest LinkedIn Tumblr


ಮಂಡ್ಯ: ಪ್ರೇಮ ಪ್ರಕರಣವೊಂದು ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ ಮತ್ತು ಪೋಷಕರಿಬ್ಬರನ್ನು ಬಲಿತೆಗೆದುಕೊಂಡಿರುವ ಘಟನೆ ನಾಗಮಂಗಲ ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂಚೇನಹಳ್ಳಿಯ ಹುಡಗಿ ಕಾಂಚನ(೧೬), ಆಕೆಯ ತಾತ ಚಂದ್ರಣ್ಣ(೬೫), ಹುಡುಗನ ತಂದೆ ಹೊನ್ನೇನಹಳ್ಳಿ ಸೋಮಶೇಖರ್(೫೦) ಎಂಬುವವರೇ ಪ್ರೇಮ ಪ್ರಕರಣದಲ್ಲಿ ಮೃತಪಟ್ಟವರಾಗಿದ್ದಾರೆ.

ಏನಿದು ಪ್ರಕರಣ?
ನಾಗಮಂಗಲ ತಾಲ್ಲೂಕಿನ ಮಂಚೇನಹಳ್ಳಿಯ ಕಾಂಚನ(೧೬) ಹಾಗೂ ಹೊನ್ನೇನಹಳ್ಳಿಯ ಯಶ್ವಂತ್ (೨೨) ಪರಸ್ವರ ಪ್ರೀತಿಸುತ್ತಿದ್ದರು. ಇಬ್ಬರ ನಡುವಿನ ಪ್ರೀತಿಯ ವಿಷಯ ಕಾಂಚನ ಪಾಲಕರಿಗೆ ತಿಳಿದಿತ್ತು. ಇದರಿಂದ ಭಯಗೊಂಡ ಆಕೆ ತಿಂಗಳ ಹಿಂದೆಯೇ ವಿಷ ಸೇವಿಸಿದ್ದಳು. ವಿಷ ಕುಡಿದ ನಂತರ ಉಂಟಾದ ನೋವು ಸಹಿಸಲು ಸಾಧ್ಯವಾಗದೆ ನೇಣಿಗೆ ಶರಣಾಗಲು ಮುಂದಾಗಿದ್ದಳು, ಈ ವೇಳೆ ಆಕೆಯನ್ನು ರಕ್ಷಿಸಿದ ಪಾಲಕರು ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ಸೇರಿಸಿದ್ದರು. ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು.

ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಾಂಚನಾಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ನಂತರ ಬಾಲಕಿಯನ್ನು ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ತಂದು ಸೇರಿಸಲಾಗಿತ್ತು. ವಿಷಯ ತಿಳಿದು ಮೊಮ್ಮಗಳನ್ನು ನೋಡಲು ಊಟಿಯಿಂದ ಆಗಮಿಸಿದ ಬಾಲಕಿಯ ತಾತಾ ೬೫ ವರ್ಷದ ಚಂದ್ರಣ್ಣ ಬಾಲಕಿಯ ಅವಸ್ಥೆ ಕಂಡು ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಈ ನಡುವೆ ಚಿಕಿತ್ಸೆ ಫಲಿಸದೆ ಬಾಲಕಿ ಕಾಂಚನಾಳೂ ಸಹ ಮೃತ ಪಟ್ಟಿದ್ದಾಳೆ. ಇತ್ತ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬೆಳ್ಳೂರು ಠಾಣೆಯ ಪೊಲೀಸರು ಹುಡುಗ ಯಶ್ವಂತ್‌ನನ್ನು ಬಂಧಿಸಿದ್ದಾರೆ.

ಯುವಕನ ತಂದೆ ನೇಣಿಗೆ ಶರಣು
ಇದರ ಮಧ್ಯೆ ಮಗ ಮಾಡಿದ ತಪ್ಪಿನಿಂದ ಬಾಲಕಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವಿಷಯ ಹಾಗೂ ಮಗನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಯಶ್ವಂತ್ ತಂದೆ ಸೋಮಶೇಖರ್ ಮಂಗಳೂರಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಸೋಮಶೇಖರ್ ಮಂಗಳೂರಿನಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಗ್ರಾಮಗಳಲ್ಲಿ ಸೂತಕದ ಛಾಯೆ
ಎರಡು ಗ್ರಾಮಗಳಲ್ಲಿ ಸೂತಕದ ಛಾಯೆ ಆವರಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ಯುವಕ ಯಶ್ವಂತ್ ತಂದೆಯ ತಿಥಿ ಕಾರ್ಯದ ನಿಮಿತ್ತ ಮಧ್ಯಂತರ ಜಾಮೀನಿನ ಮೇರೆಗೆ ಹೊರ ಬಂದು ಪ್ರತಿದಿನ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುತಿದ್ದಾನೆ ಎನ್ನಲಾಗಿದೆ.

ಒಟ್ಟಾರೆ ಪ್ರೇಮ ಪ್ರಕರಣವೊಂದು ಹೊಸ ಕನಸಿನೊಂದಿಗೆ ಬದುಕಿ ಬಾಳಬೇಕಾದ ಯುವತಿ ಹಾಗೂ ಎರಡೂ ಕುಟುಂಬಗಳ ಪೋಷಕರಿಬ್ಬರನ್ನು ಬಲಿತೆಗೆದುಕೊಂಡಿದೆ.

Comments are closed.