ಕರ್ನಾಟಕ

ಸಿದ್ದರಾಮಯ್ಯರಿಂದ ಕರೆ ಮಾಡಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಜೊತೆ ಚರ್ಚೆ

Pinterest LinkedIn Tumblr


ಬೆಂಗಳೂರು: ಬಿಜೆಪಿಯ ಅನೇಕ ಆಪರೇಷನ್ ಕಮಲ ಕಾರ್ಯಾಚರಣೆಗಳಲ್ಲಿ ಹಾಗೂ ಬಿಎಸ್​ವೈ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ

ಯಡಿಯೂರಪ್ಪ ಅವರ ಬಲಗೈನಂತಿದ್ದ ಯೋಗೇಶ್ವರ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಕ್ರಿಯ ಪಾತ್ರ ವಹಿಸಿದರೂ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಸರ್ಕಾರ ರಚನೆಯಾದರೆ ಪ್ರಮುಖ ಖಾತೆ ನೀಡುವುದಾಗಿ ಸಿಪಿವೈಗೆ ಯಡಿಯೂರಪ್ಪ ವಾಗ್ದಾನ ನೀಡಿದ್ದರಂತೆ. ಆದರೆ, ಯೋಗೇಶ್ವರ್​ಗೆ ಪ್ರಮುಖ ಖಾತೆ ಸಿಗುವುದಿರಲಿ, ಸಚಿವ ಸಂಪುಟದಲ್ಲೇ ಸ್ಥಾನ ಸಿಕ್ಕಿಲ್ಲ. ಇದರಿಂದ ಸಿ.ಪಿ. ಯೋಗೇಶ್ವರ್ ಅತೀವ ನೋವಿನಲ್ಲಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತಿವೆ.

ಚನ್ನಪಟ್ಟಣದ ಪ್ರಮುಖ ಒಕ್ಕಲಿಗ ಮುಖಂಡರಾಗಿರುವ ಯೋಗೇಶ್ವರ್ ಅವರಿಗೆ ಬಿಜೆಪಿ ಸರ್ಕಾರ ಸಂಪುಟದಲ್ಲಿ ಸ್ಥಾನವೂ ಇಲ್ಲ ವಿಧಾನ ಪರಿಷತ್ ಸದಸ್ಯನನ್ನಾಗಿಯೂ ಮಾಡಿಲ್ಲ, ಇದನ್ನೆ ಬಂಡವಾಳವಾಗಿಸಿಕೊಳ್ಳಲು ಮುಂದಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದಾರೆ, ಮುಂಬರುವ ವಿಧಾನ ಸಭೆ ಉಪ ಚುನಾವಣೆ ಗಮನದಲ್ಲಿರಿಸಿಕೊಂಡು ಸಿದ್ದರಾಮಯ್ಯ ದಾಳ ಉರುಳಿಸಲು ಮುಂದಾಗಿದ್ದಾರೆ.

ಒಕ್ಕಲಿಗ ವಿರೋಧಿ ಎಂಬ ಹಣೆ ಪಟ್ಟಿಯಿಂದ ಬೇಸರಗೊಂಡಿರುವ ಸಿದ್ದರಾಮಯ್ಯ ಯೋಗೇಶ್ವರ್ ರನ್ನು ಮುಂಚೂಣಿಗೆ ತೆರಲು ಕಸರತ್ತು ಆರಂಭಿಸಿದ್ದಾರೆ,

ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಇಬ್ಬರ ಪ್ರಾಬಲ್ಯವನ್ನು ಎದುರಿಸಿ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ತಮ್ಮದೇ ನೆಲೆ ಕಂಡುಕೊಂಡಿದ್ದಾರೆ. ವೈಯಕ್ತಿಕ ವರ್ಚಸ್ಸಿನಿಂದಲೇ ಇಲ್ಲಿ ಜನಬೆಂಬಲ ಪಡೆದುಕೊಂಡಿದ್ದಾರೆ.

ಇದೀಗ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿದ್ದಾರೆ. ಡಿಕೆ ಸುರೇಶ್ ಇಡಿ ವಿಚಾರಣೆಯ ಧಾವಂತದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸಿಪಿವೈಗೆ ಇದು ಸಕಾಲವಾಗಿದೆ. ಹೀಗಾಗಿ, ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ಯೋಜಿಸಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ ಇದರಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಸಂಬಂಧ ಮತ್ತಷ್ಟು ಹಾಳಾಗಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಮತ್ತು ಎಚ್,ಡಿ ಕುಮಾರ ಸ್ವಾಮಿ ಜೊತೆಗೂಡಿ ಯೋಗೇಶ್ವರ್ ಅವರನ್ನು ಸೋಲಿಸಿದ್ದರು. ಈಗ ಯೋಗೇಶ್ವರ್ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿರುವುದು ಶಿವಕುಮಾರ್ ಕ್ಯಾಂಪ್ ನಲ್ಲಿ ಆತಂಕ ಮೂಡಿಸಿದೆ.

Comments are closed.