ಕರ್ನಾಟಕ

ನರಭಕ್ಷಕ ಹುಲಿಯನ್ನು 2 ದಿನದಲ್ಲಿ ಸೆರೆ ಅಥವಾ ಕೊಲ್ಲು – ಪಿಸಿಸಿಎಫ್ ಜಗತ್ ರಾಮ್ ಆದೇಶ

Pinterest LinkedIn Tumblr

ಕಳೆದೊಂದು ತಿಂಗಳಿನಿಂದ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ನರಭಕ್ಷಕ ಹುಲಿಯ ಬೇಟೆಗಾಗಿ ಅರಣ್ಯ ಇಲಾಖೆ ಎಲ್ಲ ರೀತಿಯ ಸರ್ಕಸ್ ಮಾಡುತ್ತಿದೆ. ಆದರೆ ಈ ಕಾರ್ಯಾಚರಣೆ ನಡುವೆ ಇದುವರೆಗೆ ಇಬ್ಬರು ರೈತರನ್ನು ಹುಲಿ ಬಲಿ ಪಡೆದಿದ್ದು, ಹಲವು ಜಾನುವಾರುಗಳನ್ನು ತಿಂದು ಹಾಕಿದೆ.

ತಿಂಗಳ ಅವಧಿಯಲ್ಲಿ ಇಬ್ಬರನ್ನು ಬಲಿ ಪಡೆದಿರುವ ಹುಲಿಯನ್ನು ಎರಡು ದಿನದೊಳಗೆ ಸೆರೆ ಹಿಡಿಯಬೇಕು ಇಲ್ಲದಿದ್ದರೆ ಗುಂಡಿಟ್ಟು ಕೊಲ್ಲ ಬೇಕೆಂಬ ನಿರ್ಧಾರಕ್ಕೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಈ ಸಂಬಂಧ ಹುಲಿ ಯೋಜನೆಯ ಪಿಸಿಸಿಎಫ್ ಜಗತ್ ರಾಮ್ ಆದೇಶ ನೀಡಿದ್ದಾರೆ.

ಹುಲಿಯನ್ನು ಜೀವಂತ ಹಿಡಿಯುವ ಪ್ರಯತ್ನ ಮಾಡುತ್ತಿದ್ದರೂ ಹುಲಿ ಯಾರ ಕಣ್ಣಿಗೂ ಬೀಳುತ್ತಿಲ್ಲ. ಕೆಲ ದಿನಗಳ ಹಿಂದೆ ದನ ಮೇಯಿಸಲು ಹೋಗಿದ್ದ ಶಿವಮಾದಯ್ಯ ಎಂಬಾತನ ಮೇಲೆ ದಾಳಿ ಮಾಡಿದ ಹುಲಿ ಕೊಂದು ಹಾಕಿತ್ತು. ಆಗ ಹುಡುಕಾಟ ನಡೆಸಲಾಯಿತಾದರೂ ಹುಲಿ ಸಿಗಲಿಲ್ಲ. ಹೀಗಾಗಿ ಕಾರ್ಯಾಚರಣೆ ಸಡಿಲಗೊಳಿಸಿದ್ದರು. ಬೋನ್ ಇಟ್ಟಿದ್ದರೂ ಹುಲಿ ಹತ್ತಿರ ಸುಳಿಯಲಿಲ್ಲ. ಹುಲಿ ಜಾಗ ಖಾಲಿ ಮಾಡಿತೇನೋ ಎಂದು ಕೊಳ್ಳುವಾಗಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಂಡೀಪುರ ಸಮೀಪದ ಚೌಡಹಳ್ಳಿ ಗ್ರಾಮದ ಶಿವಲಿಂಗಪ್ಪ (50) ಎಂಬುವರ ಮೇಲೆ ದಾಳಿ ಮಾಡಿ ಸಾಯಿಸಿದೆ.

ಶಿವಲಿಂಗಪ್ಪ ಅವರು ದನ ಮೇಯಿಸುತ್ತಿದ್ದ ವೇಳೆ ಹೊಂಚು ಹಾಕಿ ಕುಳಿತಿದ್ದ ಹುಲಿ ಕತ್ತಿನ ಭಾಗದಲ್ಲಿ ಹಿಡಿದು ಕಚ್ಚಿ ರಕ್ತ ಹೀರಿ ಕೊಂದು ಹಾಕಿದೆ. ಈ ಹುಲಿ ಕುರಿ ಮರಿಗಳು, ದನಕರುಗಳು ಇದ್ದರೂ ಅವನ್ನು ಬಿಟ್ಟು ಮನುಷ್ಯನ ಮೇಲೆ ದಾಳಿ ಮಾಡುತ್ತಿರುವುದು ಭಯಕ್ಕೆ ಕಾರಣವಾಗಿದೆ. ಮನುಷ್ಯನ ರಕ್ತದ ರುಚಿ ಕಂಡಿರುವ ಈ ಹುಲಿ ಬೇರೆ ಪ್ರಾಣಿಗಳನ್ನು ಬಿಟ್ಟು ಮನುಷ್ಯನ ಮೇಲೆಯೇ ದಾಳಿ ಮಾಡಲು ಆರಂಭಿಸಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಗೆ ಸಿಗದಿದ್ದರೆ ಗುಂಡು ಹಾರಿಸಿ ಸಾಯಿಸುವ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ.

ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಂದ ಒಂದಲ್ಲ ಒಂದು ರೀತಿಯ ತೊಂದರೆ ಅನುಭವಿಸುತ್ತಿರುವ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಕಂಡರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಇಲಾಖೆ ವಿಫಲವಾಗಿರುವುದು ಇದಕ್ಕೆ ಕಾರಣ. ಅರಣ್ಯಾಧಿಕಾರಿಗಳು ನರಭಕ್ಷಕ ಹುಲಿ ಸೆರೆಗೆ ಬೇಕಾದ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ನರಭಕ್ಷಕ ಹುಲಿ ಜೀವಂತ ಸೆರೆ ಸಿಗುತ್ತಾ ಅಥವಾ ಗುಂಡಿಗೆ ಬಲಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Comments are closed.