ಕರ್ನಾಟಕ

ಸಾರಿಗೆ ಸಚಿವ ಲಕ್ಷ್ಮಣ ಸವದಿಯಿಂದ KSRTC ಚಾಲಕ, ನಿರ್ವಾಹಕರಲ್ಲಿ ಕ್ಷಮೆ

Pinterest LinkedIn Tumblr

ಚಿತ್ರದುರ್ಗ: ದಸರಾ ಹಬ್ಬಕ್ಕೆ ಸಂಬಳ ಕೊಡಲು ಸಾಧ್ಯವಾಗದ ಕಾರಣಕ್ಕೆ ಸಾರಿಗೆ ಇಲಾಖೆ ಚಾಲಕ, ನಿರ್ವಾಹಕರಲ್ಲಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಕ್ಷಮೆ ಯಾಚಿಸಿದ್ದಾರೆ. ಶರಣ ಸಂಸ್ಕೃತಿ ಉತ್ಸವಕ್ಕಾಗಿ ಸೋಮವಾರ ಚಿತ್ರದುರ್ಗ ಮುರುಘಾ ಮಠಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಹಬ್ಬದ ಸಂದರ್ಭದಲ್ಲಿ‌ ಮುಂಚಿತವಾಗಿ ಸಂಬಳ ಸಂದಾಯ ಮಾಡಬೇಕಿತ್ತು, ಆದರೆ ಸಾರಿಗೆ ನಿಗಮದಲ್ಲಿ ಹಣದ ಕೊರತೆಯಿಂದಾಗಿ ವೇತನ ಪಾವತಿಗೆ ತಡವಾಗಿದೆ. ಮುಖ್ಯವಾಗಿ ಹುಬ್ಬಳ್ಳಿ, ಕಲಬುರಗಿ ವಿಭಾಗದಲ್ಲಿ ಸಿಬ್ಬಂದಿ ವೇತನ ಪಾವತಿ ತಡವಾಗಿದೆ ಎಂದು ಸಚಿವರು ಹೇಳಿದ್ದಾರೆ. ಎಲ್ಲಾ ಸಿಬ್ಬಂದಿಗಳ ವೇತನವನ್ನು ಇದೇ ತಿಂಗಳ 9ಕ್ಕೆ ಪಾವತಿಸಲಾಗುವುದು ಎಂದೂ ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರನ್ನು ರಾಜ್ಯ ರಾಜಕಾರಣದಲ್ಲಿ ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸವದಿ ಅವರು ಪತ್ರಕರ್ತರು ಕೇಳಿದ ಇನ್ನೊಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Comments are closed.