ಕರ್ನಾಟಕ

ವರನಟನ ತದ್ರೂಪಿ ಅಭಿಜಾತ ಕಲಾವಿದನ ನೆರವಿಗೆ ಪತ್ನಿ ಪದ್ಮಾವತಿಯ ಮೊರೆ

Pinterest LinkedIn Tumblr

ಬೆಂಗಳೂರು: ಮತ್ತೆ ಮತ್ತೆ ವರನಟ ರಾಜಕುಮಾರ್ ಅವರನ್ನು ನಮ್ಮೆದುರು ಪ್ರತ್ಯಕ್ಷವಾಗಿಸುವ ರಂಗಭೂಮಿಯ ಅಭಿಜಾತ ಕಲಾವಿದ. ನಾಟಕ ಯಾವುದೇ ಇರಲಿ ಈ ಕಲಾವಿದನಿಗೆ ಹೀರೋ ಪಾತ್ರ ಮುಡಿಪು. ಅಲ್ಲಿ ಡಾ. ರಾಜ್ ಛಾಪು. ನೋಡಲು ವರನಟನ ತದ್ರೂಪು. ಹಾಗೆಂದು ಅನುಕರಣೀಯ ಪ್ರತಿಭೆ ಮಾತ್ರವಲ್ಲ, ಅವರೊಬ್ಬ ಅಪ್ರತಿಮ ನಟ. ಹೆಸರು ಜಯಕುಮಾರ್, ಊರು ಕೊಡಗನೂರು.

ಗುಬ್ಬಿ ಕಂಪನಿ ಸೇರಿದಂತೆ ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ… ಹೀಗೆ ಇಪ್ಪತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಕಳೆದ ಐವತ್ತು ವರ್ಷಗಳ ಕಾಲ ವೃತ್ತಿ ರಂಗಭೂಮಿಯಲ್ಲಿ ನಿರಂತರ ರಂಗಸೇವೆ ಸಲ್ಲಿಸಿದ್ದಾರೆ.

ತಿಂಗಳ ಹಿಂದೆಯಷ್ಟೇ ಕಲಬುರ್ಗಿಯಲ್ಲಿ ಖಾಯಂ ಮೊಕ್ಕಾಂ ಮಾಡಿರುವ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತವಾಯಿತು. ಎರಡನೇ ಬಾರಿಗೆ ಮತ್ತೆ ಹೃದಯಾಘಾತವಾದಾಗ, ದಾವಣಗೆರೆಗೆ ಧಾವಿಸಿ ತಜ್ಞ ವೈದ್ಯಕೀಯ ಚಿಕಿತ್ಸೆ ಪಡೆದು ಹೃದಯ ನಾಳಗಳಿಗೆ ಎರಡು ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಆದರೆ ಇನ್ನೇನು ಮನೆಗೆ ಕಳಿಸಬೇಕು ಎನ್ನುವಾಗ ಎರಡೂ ಕಿಡ್ನಿಗಳು ಕೈಕೊಡುವ ಸೂಚನೆ ಎದುರಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿದೆ.

ಕಳೆದ ಹದಿನೈದು ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಆಗುವ ಎಲ್ಲ ಲಕ್ಷಣಗಳಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಹೆಲ್ತ್ ಕಾರ್ಡಿನ ಸೌಲಭ್ಯಗಳು ಹೃದಯ ರಕ್ತನಾಳಗಳಿಗೆ ಅಳವಡಿಸಿದ ಸ್ಟಂಟ್ ಗಳಿಗೆ ಕೊನೆಗೊಂಡಿತು. ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ಚಿಕಿತ್ಸೆಗೂ ಹಣ ಕಟ್ಟಲೇಬೇಕಿದೆ. ಕಲಾವಿದ ಜಯಕುಮಾರರ ಬಳಿ ಇರುವ ಹಣವೆಲ್ಲ ಖರ್ಚಾಗಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ ಜಯಕುಮಾರರ ಜತೆ ಅವರ ಪತ್ನಿ ಪದ್ಮಾವತಿ, ಮಗ ಮಾರುತಿ‌ ಇದ್ದಾರೆ.

ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ಶಿವರಾಜ್ ಕುಮಾರ್, ದರ್ಶನ್ ಅವರಂಥ ಹಲವು ನಟರ ಜತೆ, (ಬರಗೂರರ ನಾಕೈದು ಚಿತ್ರ) ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಜಯಕುಮಾರ ನಟಿಸಿದ್ದಾರೆ. ಇವರು ಅಭಿನಯಿಸಿರುವ ಕಿರುತೆರೆ ಧಾರಾವಾಹಿಗಳು ಲೆಕ್ಕವಿಲ್ಲದಷ್ಟು. ಅಷ್ಟೇ ಪ್ರಮಾಣದಲ್ಲಿ ವೃತ್ತಿ ರಂಗನಾಟಕಗಳಲ್ಲೂ ಅಭಿನಯಿಸಿದ್ದಾರೆ. ಈಗ ಅಕ್ಷರಶಃ ಸಂಕಷ್ಟದಲ್ಲಿರುವ ಕೊಡಗನೂರು ಜಯಕುಮಾರರ ನೆರವಿಗಾಗಿ ಅವರ ಪತ್ನಿ ಶ್ರೀಮತಿ ಪದ್ಮಾವತಿ ಹಾಗೂ ಅವರ ಮಗ ಮಾರುತಿ ಮನವಿ ಮಾಡಿಕೊಂಡಿದ್ದಾರೆ.

Comments are closed.