ಕರ್ನಾಟಕ

‘ಸೈರಾ ನರಸಿಂಹ ರೆಡ್ಡಿ” ವೀಕ್ಷಿಸಿದ್ದ ಏಳು ಪಿಎಸ್‌ಐಗಳನ್ನು ಸೇವೆಯಿಂದ ಅಮಾನತು

Pinterest LinkedIn Tumblr

ಅಮರಾವತಿ,ಅ.3: ತೆಲುಗು ನಟ ಚಿರಂಜೀವಿಯವರ ಇತ್ತೀಚಿನ ಚಿತ್ರ ‘ಸೈರಾ ನರಸಿಂಹ ರೆಡ್ಡಿ ‘ಯನ್ನು ಕರ್ತವ್ಯ ದಲ್ಲಿದ್ದಾಗ ವೀಕ್ಷಿಸಿದ್ದಕ್ಕಾಗಿ ಕರ್ನೂಲು ಜಿಲ್ಲೆಯ ಏಳು ಪಿಎಸ್‌ಐಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರಲ್ಲೋರ್ವ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ತೆಗೆದಿದ್ದ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಈಗ ಶಿಸ್ತು ಕ್ರಮವನ್ನು ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳು ಬುಧವಾರ ‘ಸೈರಾ’ ಚಿತ್ರದ ಮೊದಲ ದಿನದ ಮೊದಲ ಶೋ ಅನ್ನು ವೀಕ್ಷಿಸಿದ್ದರು. ವಿವಿಧ ಪೊಲೀಸ್ ಠಾಣೆಗಳಿಗೆ ಸೇರಿದ ಈ ಪಿಎಸ್‌ಐಗಳ ಪೈಕಿ ಒಬ್ಬರೂ ಅಂದು ರಜೆಗೆ ಅರ್ಜಿಯನ್ನು ಸಲ್ಲಿಸಿರಲಿಲ್ಲ. ಹೀಗಿದ್ದರೂ ಅವರೆಲ್ಲ ಚಿತ್ರವನ್ನು ವೀಕ್ಷಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಕೊಯಿಲಕುಂಟ್ಲಕ್ಕೆ ಪ್ರಯಾಣಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದ ಈ ಪಿಎಸ್‌ಐಗಳ ಚಿತ್ರ ಕರ್ನೂಲ್ ಎಸ್‌ಪಿ ಕೆ.ಫಕೀರಪ್ಪ ಅವರ ಗಮನವನ್ನು ಸೆಳೆದಿತ್ತು. ನಂದ್ಯಾಲ್,ಅಲ್ಲಗಡ್ಡ ಮತ್ತು ಧೋನೆ ಡಿವೈಎಸ್‌ಪಿಗಳೊಂದಿಗೆ ಮಾತನಾಡಿದ ಅವರು, ವಿಚಾರಣೆಯನ್ನು ನಡೆಸಿ ಸದ್ರಿ ಪಿಎಸ್‌ಐಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಬುಧವಾರ ಗಾಂಧಿ ಜಯಂತಿ ದಿನವಾಗಿದ್ದು, ಅದಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನು ಏರ್ಪಡಿಸುವಲ್ಲಿ ಪೊಲೀಸರು ತೀವ್ರ ವ್ಯಸ್ತರಾಗಿದ್ದಾಲೇ ಈ ಪಿಎಸ್‌ಐಗಳು ಕರ್ತವ್ಯಕ್ಕೆ ಚಕ್ಕರ್ ಹಾಕಲು ನಿರ್ಧರಿಸಿದ್ದು ಮೇಲಧಿಕಾರಿಗಳ ಪಿತ್ತವನ್ನು ಇನ್ನಷ್ಟು ಕೆರಳಿಸಿತ್ತು. ಅಲ್ಲದೆ ಬುಧವಾರ ಆಂಧ್ರ ಪ್ರದೇಶದಾದ್ಯಂತ ಗ್ರಾಮೀಣ ಸೆಕ್ರೆಟರಿಯೇಟ್‌ಗಳ ಆರಂಭವನ್ನೂ ಹಮ್ಮಿಕೊಳ್ಳಲಾಗಿತ್ತು.

Comments are closed.