ಕರ್ನಾಟಕ

ಅಮೆರಿಕ ಅಧ್ಯಕ್ಷರು ಮೋದಿಯನ್ನು ರಾಷ್ಟ್ರಪಿತ ಎಂದು ಕರೆದಿದ್ದು ಅವಿವೇಕತನ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸದ್ಭಾವನ ನಡಿಗೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಮಹಾತ್ಮ ಗಾಂಧಿ ಅವರನ್ನು ಕೊಂಡಾಡುವ ಜೊತೆ ಜೊತೆಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಹಾತ್ಮಗಾಂಧಿ 150ನೇ ಜನ್ಮದಿನ ಪ್ರಯುಕ್ತ ಹಮ್ಮಿಕೊಂಡಿದ್ದ ಸದ್ಭಾವನ ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೆಂದ್ರದ ವಿರುದ್ಧ ವಾಗ್ದಾಳಿ ಹರಿಸಿದರು. ಮಾತಿನುದ್ದಕ್ಕೂ ಗಾಂಧಿ ಅವರನ್ನು ಬಣ್ಣಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ಇದೇ ವೇಳೆ ಅವರು ಕರೆಕೊಟ್ಟರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಹಾತ್ಮಾ ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ ಅವರೊಂದು ಸಿದ್ಧಾಂತ. ಮಹಾತ್ಮ ಗಾಂಧಿ ಹೇಳಿದ ರಾಮನೇ ಬೇರೆ ಹಿಂದೂ ಕೋಮುವಾದಿ ಬಿಜೆಪಿ ಪಕ್ಷ ಹೇಳುತ್ತಿರುವ ರಾಮನೆ ಬೇರೆ. ಗಾಂಧಿಜಿ ಅವರು ದೇಶವನ್ನು ಒಗ್ಗೂಡಿಸಲು ಬಳಸಿದ್ದ ರಾಮನ ಪದವನ್ನು ಇಂದು ಬಿಜೆಪಿಯವರು ದೇಶ ಒಡೆಯಲು ಬಳಸುತ್ತಿರುವುದು ವಿಪರ್ಯಾಸ. ಇವರ ಕುಟಿಲತೆಯನ್ನು ಕಾಂಗ್ರೆಸ್ ನವರು ಅರ್ಥಮಾಡಿಕೊಳ್ಳಬೇಕು. ಸಮಾನಮನಸ್ಕರು ಹೆಚ್ಚು ಹೆಚ್ಚು ಕಾಂಗ್ರೆಸ್ ಗೆ ಸೇರ್ಪಡೆ ಆಗಬೇಕು. ನನ್ನ ಬದುಕೇ ನನ್ನ ಸಂದೇಶ ಎಂದು ಹೇಳಿದ್ದ ಮಹಾತ್ಮಗಾಂಧಿ ಎಲ್ಲರ ಆದರ್ಶವಾಗಬೇಕು ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪ್ರತಿಯೊಬ್ಬ ನಾಯಕರಿಗೆ ಮಹಾತ್ಮಗಾಂಧಿ ಗುರುವಾಗಿ ಕಾಣಿಸುತ್ತಾರೆ. ಇಂದಿನ ಯುವಕರು ಗಾಂಧೀಜಿಯವರನ್ನು ಮರೆಯುತ್ತಿರುವುದು ವಿಷಾದದ ಸಂಗತಿ. ಸರಿಯಾದ ಗಾಂಧೀಜಿಯವರ ವಿಚಾರಧಾರೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಕಾರ್ಯ ಆಗಬೇಕು. ಏಕೆಂದರೆ ಗಾಂಧೀಜಿ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದ್ದಾರೆ. ವಿಚ್ಛಿದ್ರಕಾರಕ ಶಕ್ತಿಗಳು ಇಂದು ದೇಶವನ್ನು ಒಡೆಯುವ ಕಾರ್ಯ ಮಾಡುತ್ತಿದ್ದು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಇದನ್ನ ಹಿಮ್ಮೆಟ್ಟಿಸುವ ಸಂಕಲ್ಪವನ್ನು ಮಾಡಬೇಕು ಎಂದರು.

ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಟ್ರಂಪ್ ಅವರೊಬ್ಬ ಅವಿವೇಕಿ. ಮೋದಿ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದು ಅವಿವೇಕತನ ಪ್ರದರ್ಶಿಸಿದ್ದಾರೆ. ನಿಜವಾದ ದೇಶ ಭಕ್ತ ಮೋದಿ ಆಗಿದ್ದರೆ ಟ್ರಂಪ್ ಎದುರು ಇದನ್ನು ನಿರಾಕರಿಸಬೇಕಿತ್ತು. ದೇಶಕ್ಕೆ ಬರ-ನೆರೆ ಸಮಸ್ಯೆ ಎದುರಾದಾಗ ಗಾಂಧೀಜಿ ಮರುಗಿ ಜನರ ಪರವಾಗಿ ನಿಲ್ಲುವ ಕೆಲಸ ಮಾಡಿದ್ದರು. ಆದರೆ ಮೋದಿ ದೇಶಕ್ಕೆ ಆತಂಕ ಎದುರಾದಾಗ ವಿದೇಶಕ್ಕೆ ಹೋಗುತ್ತಾರೆ. ಒಬ್ಬ ಪ್ರಭಾವಿ ರಾಷ್ಟ್ರದ ಅಧ್ಯಕ್ಷರಾಗಿ ಟ್ರಂಪ್ ಆಡಿರುವ ಮಾತು ಕೂಡ ಸರಿಯಲ್ಲ. ಇಡೀ ರಾಷ್ಟ್ರವೇ ನೆರೆ ಹಾಗೂ ಬರದಿಂದ ಸಮಸ್ಯೆ ಇದೆ. ಆದರೂ ಕರ್ನಾಟಕವಲ್ಲ ಅವರ ತವರಾದ ಗುಜರಾತಿಗೆ ಕೂಡ ಹೋಗಿಲ್ಲ. ಕೇರಳ ಒರಿಸ್ಸಾ ತೆಲಂಗಾಣ ರಾಜ್ಯಗಳಿಗೆ ಭೇಟಿ ಕೊಟ್ಟಿಲ್ಲ. ಬಿಹಾರದ ಸಮಸ್ಯೆಗೆ ಸ್ಪಂದಿಸಿ ಟ್ವೀಟ್ ಮಾಡುತ್ತಾರೆ. ಸಮಸ್ಯೆಗೆ ಸ್ಪಂದಿಸಿ ಪರಿಹಾರ ಧನ ಬಿಡುಗಡೆ ಮಾಡುವ ಕಾರ್ಯ ಮಾಡಿಲ್ಲ. ಇಂತಹ ಪ್ರಧಾನಿ ದೇಶಕ್ಕೆ ಮಾರಕ ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

ಮಹಾತ್ಮ ಗಾಂಧಿ ಅವರೊಂದಿಗೆ ನರೇಂದ್ರ ಮೋದಿ ಅವರನ್ನು ಹೋಲಿಸುವ ಕಾರ್ಯ ದೇಶದಲ್ಲಿ ಆಗುತ್ತಿದೆ ಇದು ಸಮಂಜಸವಲ್ಲ. ಜಾತಿ-ಜಾತಿಗಳ ನಡುವೆ ದ್ವೇಷದ ಬೀಜ ಬಿತ್ತುವ ಕೆಲಸ ಮೋದಿ ಮಾಡುತ್ತಿದ್ದು, ಇದನ್ನುನೋಡಿಕೊಂಡು ಕಾಂಗ್ರೆಸ್ ನವರು ಸುಮ್ಮನೆ ಕೂರಬಾರದು. ಕೋಮುವಾದಿಗಳ ವಿರುದ್ಧ ಸಿಡಿದೆದ್ದು ಹೋರಾಟ ಮಾಡಲು ಇದು ಸಕಾಲ. ಮಹಾತ್ಮಾ ಗಾಂಧಿಗಿಂತ ಶ್ರೇಷ್ಠ ಹಿಂದು ಇನ್ನೊಬ್ಬರು ಸಿಗಲು ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳ ವ್ಯಕ್ತಿಯಾಗಿ ಅವರು ಕಂಡುಬಂದಿದ್ದರು. ಒಂದು ಜಾತಿಗೆ ಯಾವತ್ತು ಸೀಮಿತವಾಗಿರಲಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಗಾಂಧಿ ವಿರುದ್ಧ ಹೋರಾಟ ಮಾಡಿದವರು ಇಂದು ಗಾಂಧೀಜಿ ಅವರನ್ನು ಶ್ಲಾಘಿಸುವ ಕೆಲಸ ಮಾಡುತ್ತಿದ್ದಾರೆ. ಗಾಂಧಿಯ ವಿರುದ್ಧವಾದ ತತ್ವ ಸಿದ್ಧಾಂತ ಹೊಂದಿರುವ ಸರ್ಕಾರ ದೇಶವನ್ನು ಆಳುತ್ತಿರುವುದು ವಿಷಾದನೀಯ ಎಂದು ವಾಗ್ದಾಳಿ ನಡೆಸಿದರು.

ಮಹಾತ್ಮ ಗಾಂಧಿ ಕಂಡ ಕಲ್ಪನೆಯ ಭಾರತ ಇಂದು ನಿರ್ಮಾಣವಾಗಿಲ್ಲ. ಬದಲಾಗಿ ದೇಶ ಗಾಂಧಿ ಕನಸಿನಿಂದ ದೂರವಾಗುತ್ತಾ ಸಾಗಿದೆ. ಗಾಂಧಿ ವಿರೋಧಿ ಸಿದ್ಧಾಂತಕ್ಕೆ ಬೆಂಬಲ ನೀಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ, ನೆಹರು ಅವರನ್ನು ಅವಹೇಳನ ಮಾಡಲಾಗುತ್ತಿದೆ. ರಾಷ್ಟ್ರ ನಿರ್ಮಾತೃಗಳ ಬಗ್ಗೆ ಅಸಂಸದೀಯ ಭಾಷೆಯ ಬರಹಗಳನ್ನು ಬರೆಯಲಾಗುತ್ತಿದೆ. ಇದರ ಹಿಂದೆ ಕೋಮುವಾದಿ ಶಕ್ತಿಗಳು ಹಾಗೂ ಸಂಘಪರಿವಾರದ ಕೈವಾಡ ಇದೆ. ಗಾಂಧಿ ಅವರನ್ನು ಇಂದಿನ ಯುವ ಪೀಳಿಗೆ ತಿರಸ್ಕಾರ ಭಾವನೆ ಮೂಡಿಸುವ ಬರಹಗಳನ್ನು ಬರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಮಹಾತ್ಮಾ ಗಾಂಧಿಯವರ ಪರವಾಗಿ ಕಾಂಗ್ರೆಸ್ ದನಿಯೆತ್ತುವುದು ಅನಿವಾರ್ಯವಾಗಿದೆ. ಸತ್ಯಕೋಸ್ಕರ ಆಗ್ರಹಿಸಿ ಸತ್ಯಾಗ್ರಹ ನಡೆಸಿದ್ದ ಗಾಂಧಿ ಅವರನ್ನು ಸ್ಮರಿಸುವ ಸರಿಯಾದ ಕಾರ್ಯ ಆಗಬೇಕಿದೆ. ದೇಶವಿದೇಶಗಳಲ್ಲಿ ಗಾಂಧೀಜಿಗೆ ಉತ್ತಮ ಬೆಲೆ ಇತ್ತು. ಇಂದು ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಮತ್ತೆ ಗಾಂಧಿಯವರ ಹಾಗೂ ಜನಪರ ಕಾಳಜಿಯನ್ನು ಜನರಿಗೆ ನೇರವಾಗಿ ಪರಿಚಯಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುವ ಕೇಂದ್ರ ಸರ್ಕಾರ ಅಧಿಕಾರದಲ್ಲಿದೆ. ಸುಳ್ಳನ್ನು ಸತ್ಯವೆಂದು ಪ್ರಚಾರ ಮಾಡಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.

ಕೋಮು ಸಾಮರಸ್ಯ ಹಾಗೂ ಜಾತ್ಯತೀತ ಸಿದ್ಧಾಂತ ತೊಡೆದು ಹಾಕುವ ಕಾರ್ಯ ನಡೆಯುತ್ತಿದೆ. ಎಲ್ಲ ರೀತಿಯಲ್ಲೂ ಜನರಿಗೆ ದಬ್ಬಾಳಿಕೆ, ಭಯ ಹಾಗೂ ಸರ್ಕಾರದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ದೌರ್ಜನ್ಯ ನಡೆಸುತ್ತಿದೆ. ಇಂದು ಮಹಾತ್ಮಗಾಂಧಿ ಜೀವಂತವಾಗಿದ್ದರೆ ಅವರೇ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡುತ್ತಿದ್ದರು. ದೇಶ ಉಳಿಸುವ ನಿಟ್ಟಿನಲ್ಲಿ ಹೋರಾಟದ ನೇತೃತ್ವ ವಹಿಸುತ್ತಿದ್ದರು. ನಾವೆಲ್ಲ ಮಹಾತ್ಮಗಾಂಧಿ ಆಗಲು ಸಾಧ್ಯವಿಲ್ಲ. ಆದರೆ ಅವರ ತತ್ವ ಸಿದ್ದಾಂತ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.
ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಹೋರಾಡುವ ಅಗತ್ಯವಿದೆ. ದೇಶಭಕ್ತ ಎಂದು ಹೇಳಿಕೊಂಡು ಬಿಜೆಪಿಯವರು ಇಂದು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕೋಮುವಾದಿ ಶಕ್ತಿಗಳು ಎಂದು ಗಾಂಧಿ ಹತ್ಯೆಯಾದ ದಿನವನ್ನು ಸಂಭ್ರಮದ ದಿನವಾಗಿ ಆಚರಿಸುವವರು ವಿಜೃಂಭಿಸುತ್ತಿದ್ದಾರೆ. ಶ್ರೀರಾಮನ ಹೆಸರಿನಲ್ಲಿ ಹಿಂಸಾಚಾರ ನಡೆಸುವ, ದೇವರ ಹೆಸರಿನಲ್ಲಿ ದೌರ್ಜನ್ಯ, ಅತ್ಯಾಚಾರ ಕೊಲೆ ಮಾಡುವ ಕಾರ್ಯ ಸಹ ಮಾಡಲಾಗುತ್ತಿದೆ. ಮುಸ್ಲಿಮರು ಹಾಗೂ ದಲಿತರು ಕ್ರಿಶ್ಚಿಯನ್ನರ ಬಗ್ಗೆ ಕೀಳಾಗಿ ಮಾತನಾಡುವ, ದ್ವೇಷದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ದೇಶ ಕಟ್ಟುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದ್ದು, ಇದಕ್ಕೆ ಭವಿಷ್ಯವಿಲ್ಲ. ದೇಶ ಹಾಳು ಮಾಡುವ ಧೋರಣೆಯನ್ನು ಬಿಜೆಪಿ ಸರ್ಕಾರ ಹೊಂದಿದೆ ಎಂದರು.

Comments are closed.