ಕರ್ನಾಟಕ

ಟ್ವಿಟ್ಟರ್‌ನಲ್ಲಿ ಸದಾನಂದಗೌಡರಿಂದ ಬ್ಲಾಕ್ ಭಾಗ್ಯ: ಧನ್ಯವಾದ ತಿಳಿಸಿದ ಸೂಲಿಬೆಲೆ

Pinterest LinkedIn Tumblr


ಬೆಂಗಳೂರು: ಪರಸ್ಪರ ವಾಕ್ ಹಾಗೂ ಟ್ವೀಟ್ ಸಮರದ ಬೆನ್ನಲ್ಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ್ದಾರೆ.

ಕೇಂದ್ರ ಸಚಿವರು ಬ್ಲಾಕ್ ಮಾಡಿರುವುದನ್ನು ಸ್ಕ್ರೀನ್ ಶಾರ್ಟ್ ತೆಗೆದು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ಅವರು, ನಿಮಗೆ ಧನ್ಯವಾದ (ಥ್ಯಾಂಕ್ ಯೂ) ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಟ್ವಿಟ್ಟಿಗರು ತಮ್ಮದೆ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮಗೂ ಬ್ಲಾಕ್ ಭಾಗ್ಯ ಕೊಟ್ಟಿದ್ದಾರೆ ಎಂದು ಪೂರ್ವಿ ರಾಜ್ ಅರಸು ರಿಟ್ವೀಟ್ ಮಾಡಿದ್ದಾರೆ. ಪ್ರಣವ್ ಭಟ್ ರಿಟ್ವೀಟ್ ಮಾಡಿ, ತಾಕತ್ತಿದ್ದರೆ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಿ. ಅದನ್ನು ಬಿಟ್ಟು ಬ್ಲಾಕ್ ಮಾಡೋದಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಚಕ್ರವರ್ತಿ ಸೂಲೆಬೆಲೆ ಅವರೇ ನೀವು ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚನೆ ಮಾಡಿ ಕಷ್ಟಪಟ್ಟಿದ್ದು ಇವರಿಗೆ ಪರೋಕ್ಷವಾಗಿ ಅನುಕೂಲವೇ ಆಯಿತು. ಮುಂದೆಯೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲಾ, ಬರೋಕೆ ಬಿಡಲ್ಲ. ಯುವಜನತೆ ಒಂದು ಕರೆ ಕೊಟ್ಟರೆ ಇವರೆಲ್ಲಾ ಮಕಾಡೆ ಮಲಗೋದು ಗ್ಯಾರಂಟಿ ಎಂದು ಯೋಗಿ ಎಂಬವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ನಗರದಲ್ಲಿ ಮಾತನಾಡಿದ್ದ ಕೇಂದ್ರ ಸಚಿವರು, ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‍ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Comments are closed.