ಕರ್ನಾಟಕ

ಮುಖ್ಯಮಂತ್ರಿ ಯಡಿಯೂರಪ್ಪ ಮೂಲೆಗುಂಪಿಗೆ ಹೈಕಮಾಂಡ್ ರಣತಂತ್ರ

Pinterest LinkedIn Tumblr


ಬೆಂಗಳೂರು (ಅ.10): ನನ್ನ ಅಧಿಕಾರ ಎಂಬುದು ತಂತಿ ಮೇಲಿನ ನಡಿಗೆ ಎಂದು ಬಿ.ಎಸ್.​ ಯಡಿಯೂರಪ್ಪ ಇತ್ತೀಚೆಗೆ ಹೇಳಿಕೆ ನೀಡಿದ್ದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಹೇಳಿಕೆಯಿಂದ ರಾಜ್ಯದಲ್ಲಿ ಬಿಎಸ್​ವೈ ನಾಮ ಮಾತ್ರ ಮುಖ್ಯಮಂತ್ರಿ, ಅಧಿಕಾರವೆಲ್ಲ ಹೈಕಮಾಂಡ್​ ಕೈನಲ್ಲಿದೆ ಎನ್ನುವುದು ಸ್ಪಷ್ಟವಾಗಿತ್ತು. ಇದೀಗ ಬಿಎಸ್​ವೈ ಅವರನ್ನು ಮತ್ತಷ್ಟು ಮೂಲೆಗುಂಪು ಮಾಡಲು ಹೈಕಮಾಂಡ್​ ನಿರ್ಧರಿಸಿದ್ದಾರಂತೆ! ಇದಕ್ಕೆ ರಣತಂತ್ರವೂ ಕೂಡ ಹೆಣೆಯಲಾಗುತ್ತಿದೆ ಎಂಬ ಮಾತುಗಳ ಬಿಜೆಪಿ ಮೂಲದಿಂದ ಕೇಳಿ ಬರುತ್ತಿದೆ.

ನಳಿನ್​ ಕುಮಾರ್​ ಕಟೀಲ್​ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ನೇಮಿಸಿದ ನಂತರ ಪಕ್ಷದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತು ನಡೆಯುಯುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮಂಗಳವಾರ ನಡೆದ ಮೇಯರ್​ ಚುನಾವಣೆಯಲ್ಲೂ ಬಿಎಸ್​ವೈ ಮಾತಿಗೆ ಕವಡೆ ಕಾಸಿನ ಕಿಮತ್ತು ನೀಡಿರಲಿಲ್ಲ. ಹೀಗೆ ಹಂತ ಹಂತವಾಗಿ ಬಿಎಸ್​ವೈ ಅವರನ್ನು ಹಿನ್ನೆಲೆಗೆ ತಳ್ಳಲಾಗುತ್ತಿದೆ.

ಪಕ್ಷದ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ತಲೆಹಾಕಬಾರದು. ಯಡಿಯೂರಪ್ಪ ಸರ್ಕಾರದ ಕೆಲಸಗಳಿಗಷ್ಟೇ ಸೀಮಿತವಾಗಬೇಕು ಹಾಗೂ ವಿಜಯೇಂದ್ರ ರಾಜ್ಯ ಸರ್ಕಾರದ ವಿಷಯದಲ್ಲಿ ಮೂಗು ತೂರಿಸಬಾರದು ಎನ್ನುವ ಆದೇಶ ಹೈ ಕಮಾಂಡ್​ನಿಂದ ರಾಜ್ಯ ಸರ್ಕಾರಕ್ಕೆ ರವಾನೆಯಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿಯ ಹೊಣೆ ಹೊತ್ತಿರುವ ಮುರುಳೀಧರ್ ರಾವ್​ಗೆ ಬಿಜೆಪಿ ಹಿರಿಯ ನಾಯಕ ಜೆಪಿ ನಡ್ಡಾ ಈಗಾಗಲೇ ಬಿಎಸ್​ವೈ ಗೆ ಹೀಗೊಂದು ನಿರ್ದೇಶನ ನೀಡಿದ್ದಾರೆ.

“ವಿಜಯೇಂದ್ರ ವರ್ಗಾವಣೆ ದಂಧೆಯಲ್ಲಿ ತಲೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡುವ ಬದಲು ವಿಜಯೇಂದ್ರ ಬಳಿ ಕೈ ಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಕೆಲ ಶಾಸಕರು ಹೈಕಮಾಂಡ್​ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ, ವಿಜಯೇಂದ್ರ ಕಾರ್ಯವೈಕರಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವೆ ಸಮನ್ವಯತೆ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇವರ ನಡುವೆ ಸಮನ್ವಯತೆ ಮೂಡಿಸಲು ಇಬ್ಬರ ಜೊತೆಗೆ ಸಭೆ ನಡೆಸಲು ಮುರುಳೀಧರ್ ರಾವ್ ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ಮುರುಳೀಧರ್ ರಾವ್ ಸಂಧಾನ ಸಭೆ ನಡೆಸಲಿದ್ದಾರಂತೆ.

ಕೆಲ ಶಾಸಕರು ಹಾಗೂ ಸಚಿವರು ಮಾಧ್ಯಮಗಳ ಎದುರು ಬಾಯಿಗೆ ಬಂದಂತೆ ಮಾತನಾಡಿದ್ದಿದೆ. ಇದು ಪಕ್ಷದ ವರ್ಚಸ್ಸನ್ನು ಕುಂದಿಸುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಹೇಳಿಕೆ ನೀಡುವ ಮುನ್ನ ಎಚ್ಚರ ವಹಿಸಿ ಎನ್ನುವ ಖಡಕ್​ ಸೂಚನೆಯನ್ನು ಮುರುಳೀಧರ್ ರಾವ್ ನೀಡಲಿದ್ದಾರೆ.

Comments are closed.