ಕರ್ನಾಟಕ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಉದ್ಯೋಗ ಖಾತರಿ ಯೋಜನೆ ಸ್ಥಗಿತವಿಲ್ಲ: ಈಶ್ವರಪ್ಪ

Pinterest LinkedIn Tumblr


ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯ ಸರಕಾರ ಸ್ಥಗಿತಗೊಳಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗಾಂಧಿ ಜಯಂತಿ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಕೇಂದ್ರ ಸರಕಾರದಿಂದ ಬರಬೇಕಿದ್ದ 485 ಕೋ. ರೂ. ಬಾಕಿ ಪೈಕಿ ಬುಧವಾರ 347 ಕೋ. ರೂ. ಬಿಡುಗಡೆಯಾಗಿದ್ದು, 86 ಕೋ. ರೂ. ಬಾಕಿ ಬರಬೇಕಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೂಲಿ ಮತ್ತು ಸಾಮಗ್ರಿ ಹಣ ಸಹಿತ ಒಟ್ಟು 950 ಕೋ. ರೂ. ಬಾಕಿ ಬಿಡುಗಡೆಯಾಗಿದೆ ಎಂದರು.

ರಾಜ್ಯದ 6022 ಗ್ರಾ.ಪಂ. ಗಳ ಪೈಕಿ ತಾಲೂಕಿಗೊಂದರಂತೆ 176 ಗ್ರಾ.ಪಂ.ಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 176 ಗ್ರಾ.ಪಂ. ಮಾದರಿಯಾಗಿವೆ. ಪ್ರಶಸ್ತಿ ಪುರಸ್ಕೃತ ಗ್ರಾ.ಪಂ. ಜತೆಗೆ ಎರಡನೇ ಮತ್ತು ಮೂರನೇ ಸ್ಥಾನ ಪಡೆದ ಗ್ರಾ.ಪಂ.ಗಳ ಪ್ರಮುಖರನ್ನೂ ನ.2ರಂದು ಬೆಂಗಳೂರಿನಲ್ಲಿ ಒಟ್ಟುಗೂಡಿಸಿ ವಿಶೇಷ ತರಬೇತಿ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದ 30 ಜಿ.ಪಂ. ಮಟ್ಟದಲ್ಲಿ ಕುಡಿಯುವ ನೀರು ಹಾಗೂ ತುರ್ತು ಸ್ಪಂದನೆಗಾಗಿ ಜಿ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ರಚಿಸಲು ತೀರ್ಮಾನಿಸಲಾಗಿದ್ದು, ಪ್ರತಿ ಜಿ. ಪಂ.ಗೆ ತಲಾ ಒಂದು ಕೋ. ರೂ. ಅನುದಾನ ನೀಡಲಾಗುವುದು. ಉತ್ತರ ಕರ್ನಾಟಕದ 10-12 ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಲಾಖೆಯ ವಿಶೇಷ ಕಚೇರಿ ಆರಂಭಿಸಿ, ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡುವ ಅಧಿಕಾರ ನೀಡಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ಬಯಲು ವ್ಯಾಯಾಮ
ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಫಿಟ್‌ ಇಂಡಿಯಾ’ ಪರಿಕಲ್ಪನೆಯ ವಿಶೇಷ ಯೋಜನೆಯನ್ನು ಗ್ರಾ. ಪಂ. ಮೂಲಕ ಜಾರಿಗೊಳಿಸುವ ಅಪೇಕ್ಷೆ ಇದೆ. ಗ್ರಾಮೀಣ ಯುವಜನತೆ, ಹೆಣ್ಣು ಮಕ್ಕಳು, ಇತರರು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪೂರಕವಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತೆರೆದ ವ್ಯಾಯಾಮ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ರೈತರು, ಬಡವರಿಗೆ ನೆರವಾಗುವ ಕೆಲಸವನ್ನು ನಾವು, ನೀವು ಸೇರಿ ಮಾಡುವ ಮೂಲಕ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ, ರಾಮರಾಜ್ಯ ನಿರ್ಮಾಣ ಕನಸನ್ನು ನನಸು ಮಾಡಬೇಕಿದೆ.
-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

Comments are closed.