ಕರ್ನಾಟಕ

ಮಲೆನಾಡಿನಲ್ಲಿ ಗುಡ್ಡ ಕುಸಿತ ತಡೆಗೆ ತಮಿಳುನಾಡಿನಿಂದ ಬಂದಿವೆ ಲಾವಂಚ

Pinterest LinkedIn Tumblr


ಬಣಕಲ್: ನೆರೆಪೀಡಿತ ಪ್ರದೇಶಗಳಾದ ಬಾಳೂರು, ಚನ್ನಡ್ಲು, ಕೂವೆ ಗ್ರಾಮಗಳಲ್ಲಿ ಸ್ವಲ್ಪ ಮಳೆ ಬಂದರೂ ಗುಡ್ಡ ನಿಧಾನಕ್ಕೆ ಕುಸಿಯುತ್ತಿರುವುದನ್ನು ತಡೆಯಲು ಗಬ್​ಗಲ್​ನ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ತಂಡ ಕುಸಿತವಾದ ಜಾಗದಲ್ಲಿ ಲಾವಂಚ ಹುಲ್ಲು ನಾಟಿ ಮಾಡಲು ಮುಂದಾಗಿದೆ.

ಬಾಳೂರು, ಚನ್ನಡ್ಲು, ಕೂವೆಯ ಮುಖ್ಯರಸ್ತೆ ಬದಿಯಲ್ಲಿ ಲಾವಂಚ ಹುಲ್ಲು ನಾಟಿ ಮಾಡಲಾಗುತ್ತಿದೆ. ಇದರ ಬೇರುಗಳು 6 ರಿಂದ 7 ಅಡಿವರೆಗೂ ಮಣ್ಣಿನಾಳಕ್ಕೆ ಇಳಿದು ಮಣ್ಣನ್ನು ಬಿಗಿಗೊಳಿಸಿ ಕುಸಿಯದಂತೆ ತಡೆಯುತ್ತದೆ. ಈ ಹುಲ್ಲಿನ ಒಂದು ಕಾಂಡ ಮೂರು ವರ್ಷಗಳಲ್ಲಿ ಒಂದು ಅಡಿ ಅಗಲ ಬೆಳೆಯಲಿದ್ದು ಕಾಂಡದಲ್ಲಿ 60 ರಿಂದ 75 ಸಸಿಗಳು ಇರುತ್ತವೆ.

ತಮಿಳುನಾಡಿನಿಂದ ಸುಮಾರು 4 ಸಾವಿರ ಲಾವಂಚ ಹುಲ್ಲು ತರಲಾಗಿದ್ದು ಭೂ ಸವಕಳಿ ತಡೆಯಲು ಟಾಟಾ ಕಂಪನಿ ಈ ಪ್ರಯೋಗಕ್ಕೆ ಮುಂದಾಗಿದೆ. ಕಂಪನಿಯ 28 ಕಾರ್ವಿುಕರು ಹುಲ್ಲು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ಜೀವನ್.

ಚಾರ್ವಡಿ ಘಾಟ್ ಮತ್ತು ಕೊಟ್ಟಿಗೆಹಾರ ಹೊರನಾಡು ಮಾರ್ಗದ ಇಕ್ಕೆಲಗಳಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿವೆ. ಈ ಸ್ಥಳಗಳಲ್ಲಿ ಲಾವಂಚ ಹುಲ್ಲು ನೆಟ್ಟರೆ ಗುಡ್ಡ ಕುಸಿತವಾಗುವುದನ್ನು ತಡೆಯಬಹುದು. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕಿದೆ.

Comments are closed.