ಕರ್ನಾಟಕ

ಐಎಂಎ ಬಹುಕೋಟಿ ವಂಚನೆ ಪ್ರಕರಣ; ಸಿಬಿಐ ಅಧಿಕಾರಿಗಳಿಂದ ಜಮೀರ್​ ಅಹ್ಮದ್​ ವಿಚಾರಣೆ

Pinterest LinkedIn Tumblr


ಬೆಂಗಳೂರು (ಸೆಪ್ಟೆಂಬರ್​.19); ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಮಾಜಿ ಸಚಿವ ಜಮೀರ್​ ಅಹ್ಮದ್​ ಅವರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ತನ್ನ ಆಸ್ತಿಯನ್ನು ಮನ್ಸೂರ್​ ಖಾನ್​ಗೆ ಮಾರಾಟ ಮಾಡಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಐಎಂಎ ಕಂಪೆನಿ ಹೆಸರಿನಲ್ಲಿ ಸಾವಿರಾರು ಮಂದಿಗೆ ಸುಮಾರು 20 ಸಾವಿರ ಕೋಟಿಗೂ ಅಧಿಕ ವಂಚನೆ ಮಾಡಿದ್ದ ಮನ್ಸೂರ್​ ಖಾನ್​ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ಗೆ ವಹಿಸಿರುವ ಪರಿಣಾಮ ಸಿಬಿಐ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣ ವೇಳೆ ಆರೋಪಿ ಮನ್ಸೂರ್​ ಖಾನ್​ ಮಾಜಿ ಸಚಿವರಾದ ರೋಷನ್​ ಬೇಗ್ ಹಾಗೂ ಜಮೀರ್​ ಅಹ್ಮದ್ ಅವರಿಗೆ ಹಣ ನೀಡಿರುವ ಕುರಿತು ಮಾಹಿತಿ ನೀಡಿದ್ದರು. ಹೀಗಾಗಿ ಜಮೀರ್​ ಅಹ್ಮದ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್​ ನೀಡಿತ್ತು.

ಸಿಬಿಐ ಸಮನ್ಸ್​ ಅನ್ವಯ ಇಂದು ಜಮೀರ್​ ಅಹ್ಮದ್​ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸಿಬಿಐ ಅಧಿಕಾರಿಗಳು, ಬೆಂಗಳೂರಿನ ರಿಚ್​ಮಂಡ್​ ಸರ್ಕಲ್​ನಲ್ಲಿದ್ದ ಆಸ್ತಿಯನ್ನು ಜಮೀರ್​ ಅಹ್ಮದ್​ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಐಎಂಎ ಕಂಪೆನಿ ಮಾಲೀಕ ಮನ್ಸೂರ್​ ಖಾನ್​ ಗೆ ಮಾರಾಟ ಮಾಡಿರುವ ಕುರಿತು ಪ್ರಶ್ನೆ ಮಾಡಿದ್ದಾರೆ. ಆದರೆ, ಜಮೀರ್​ ಅಹ್ಮದ್​ ಸಿಬಿಐ ಅಧಿಕಾರಿಗಳ ಪ್ರಶ್ನೆಗಳಿಗೆ ಸೂಕ್ತ ದಾಖಲೆಗಳನ್ನು ಮುಂದಿಟ್ಟು ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸತತ ಒಂದು ಗಂಟೆಯ ವಿಚಾರಣೆ ನಂತರ ಸಿಬಿಐ ಅಧಿಕಾರಿಗಳು ಜಮೀರ್ ಅಹ್ಮದ್ ಅವರನ್ನು ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿ ಕಳುಹಿಸಿದ್ದಾರೆ. ವಿಚಾರಣೆ ಬಳಿಕ ಮಾಜಿ ಸಚಿವ ಜಮೀರ್​ ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆ ಜೈಪುರ್​ಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

Comments are closed.