ಕರ್ನಾಟಕ

ನಿದ್ರೆಗೆ ಜಾರಿದ ಚಾಲಕ; ಪ್ರಯಾಣಿಕನಿಂದ ಬಸ್‌ ಚಾಲನೆ

Pinterest LinkedIn Tumblr


ಗೌರಿಬಿದನೂರು: ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಬಸ್‌ ಓಡಿಸುವಾಗಲೇ ನಿದ್ದೆ ಮಾಡುವುದನ್ನು ಗಮನಿಸಿದ ಪ್ರಯಾಣಿಕ ಎಚ್ಚೆತ್ತಿದ್ದರಿಂದ ಕ್ಷಣಾರ್ಧದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಸೆ.11ರಂದು ಮಧ್ಯಾಹ್ನ 4 ಗಂಟೆ ಸಮದಯಲ್ಲಿ ಜರುಗಿದೆ.

ನಡೆದಿದ್ದೇನು?: ಸೆ.11ರಂದು ಮಧ್ಯಾಹ್ನ 4 ಗಂಟೆಯ ಸಮಯದಲ್ಲಿಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದ ಸಾರಿಗೆ ವಾಹನ ಚಾಲಕ ದೊಡ್ಡಬಳ್ಳಾಪುರ ದಾಟಿದ ಬಳಿಕ ಬಸ್‌ ಚಾಲನೆ ಮಾಡಿಕೊಂಡೇ ನಿದ್ರೆಗೆ ಜಾರಿಬಿಟ್ಟಿದ್ದ. ಆದರೂ ಕೈ ಮಾತ್ರ ಸ್ಟಿಯರಿಂಗ್‌ ಮೇಲಿತ್ತು. ಇದನ್ನು ಕಂಡ ಪ್ರಯಾಣಿಕನೊಬ್ಬ ಗಾಬರಿಗೊಂಡು ಕೂಗಿಕೊಂಡಿದ್ದಾನೆ. ಆವಾಗಲೂ ಚಾಲಕ ಎಚ್ಚರಗೊಂಡಿಲ್ಲ. ತಕ್ಷಣ ಪ್ರಯಾಣಿಕ ಪ್ರಶಾಂತ್‌ರೆಡ್ಡಿ ಎಂಬಾತ ತನ್ನ ಸಮಯ ಪ್ರಜ್ಞೆಯಿಂದ ವಾಹನವನ್ನು ನಿಲುಗಡೆ ಮಾಡಿ, ಚಾಲಕನನ್ನು ಪಕ್ಕದ ಸೀಟ್‌ನಲ್ಲಿಮಲಗಿಸಿ ನಂತರ ಬಸ್‌ನ್ನು ಪ್ರಯಾಣಿಕನೆ ಚಾಲನೆ ಮಾಡಿಕೊಂಡು ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಪ್ರಾಣಾಪಾಯದಂದ ಪಾರು ಮಾಡಿ ಗೌರಿಬಿದನೂರು ನಿಲ್ದಾಣಕ್ಕೆ ಕರೆತಂದಿದ್ದಾನೆ.

ತಪ್ಪಿದ ಭಾರಿ ಅನಾಹುತ: ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿ ಆಂಧ್ರ ಪ್ರದೇಶದ ಸಂಪರ್ಕ ರಸ್ತೆಯಾಗಿದ್ದು, ಅತಿ ಹೆಚ್ಚು ವಾಹನ ಸಂಚಾರ ದಟ್ಟಣೆಯಿರುತ್ತದೆ. ಹೀಗಾಗಿ ಇಲ್ಲಿಒಂದು ಕ್ಷಣ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಯಾಣಿಕ ಎಚ್ಚೆತ್ತುಕೊಂಡಿದ್ದರಿಂದ ಅನಾಹುತ ತಪ್ಪಿದೆ.

ಸ್ಥಳಕ್ಕಾಗಮಿಸಿದ ಘಟಕಾಧಿಕಾರಿ ಚಾಲಕನನ್ನು ವಿಚಾರಿಸಿದಾಗ ನೆಗಡಿ ಇದ್ದ ಕಾರಣ ಮಾತ್ರೆಯನ್ನು ತೆಗೆದುಕೊಂಡೆ. ಹೀಗಾಗಿ ನಿದ್ದೆಗೆ ಜಾರಿದಂತಾಯಿತು ಎಂದು ತಿಳಿಸಿದ್ದಾನೆ. ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಪ್ರಯಾಣಿಕ ಪ್ರಶಾಂತ್‌ರೆಡ್ಡಿಯವರ ಸಮಯ ಪ್ರಜ್ಞೆಯನ್ನು ಅಭಿನಂದಿಸಲಾಯಿತು.
“ಚಾಲಕ ಮತ್ತು ನಿರ್ವಾಹಕರಿಗೆ ಯಾವುದೇ ರೀತಿ ಕರ್ತವ್ಯದಲ್ಲಿ ಒತ್ತಡ ಹೇರುವುದಿಲ್ಲ. ಆದರೆ ಚಾಲಕ ನೆಗಡಿ ಇದ್ದ ಕಾರಣ ಮಾತ್ರೆಯನ್ನು ತೆಗೆದುಕೊಂಡಿದ್ದಾನೆ. ಆತನ ಜೇಬಿನಲ್ಲಿದ್ದ ಮಾತ್ರೆಯಿಂದ ಇದು ಗೊತ್ತಾಯಿತು. ತಕ್ಷಣ ಆತನನ್ನು ವೈದ್ಯಕೀಯ ಪರೀಕ್ಷಗೊಳಪಡಿಸಲಾಗಿದ್ದು, ಮದ್ಯ ಸೇವನೆ ಮಾಡಿಲ್ಲ ಎಂಬುದು ಸಾಬೀತಾಗಿದೆ. ಈ ರೀತಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು. ಚಾಲಕರಿಗೆ ಸೂಚನೆಗಳನ್ನು ನೀಡಲಾಗುವುದು.”-ವನಜಲೇಖ ನಾಯಕ್‌, ಸಾರಿಗೆ ಘಟಕಾಧಿಕಾರಿ, ಗೌರಿಬಿದನೂರು
“ಸಾರಿಗೆ ಸಂಸ್ಥೆಯಲ್ಲಿ ಚಾಲಕರ ಮತ್ತು ನಿರ್ವಾಹಕರಿಗೆ ನಿರಂತರವಾಗಿ ಕರ್ತವ್ಯದ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಪ್ರತಿನಿತ್ಯ 8 ಗಂಟೆಗಳ ಕಾಲ ಕರ್ತವ್ಯ ಮಾಡಬೇಕು. ಇದರ ಜತೆಗೆ ಓಟಿ (ಹೆಚ್ಚುವರಿ ಕರ್ತವ್ಯ) ಮೇಲೆ 2 ಗಂಟೆ ಕೆಲಸ ಮಾಡಬೇಕಿದೆ. ಆದರೆ ಒಟಿ ಹಣ ಕೊಡುವುದು ಒಂದು ಗಂಟೆಗೆ ಮಾತ್ರ. ಇದರ ಜತೆಗೆ ಇಂತಿಷ್ಟು ಕಿ.ಮೀ.ಗಳೆಂದು ನಿಗದಿ ಮಾಡಿರುತ್ತಾರೆ. ಹಗಲು ರಾತ್ರಿ ನಿಗದಿತ ಕಿ.ಮೀ. ಕ್ರಮಿಸಲೇಬೇಕಿದೆ. ಇದರಿಂದ ಕೆಲವು ಬಾರಿ ಚಾಲಕರು ನಿದ್ದೆಗೆ ಜಾರಿ ಅಪಘಾತಗಳಾಗಿರುವ ನಿದರ್ಶನಗಳಿವೆ.”-ಹೆಸರೇಳದ ಸಾರಿಗೆ ಚಾಲಕ, ನಿರ್ವಾಹಕರು

Comments are closed.