ಕರ್ನಾಟಕ

ಪಿಎಂ ಕಿಸಾನ್ ಯೋಜನೆಯ ರಾಜ್ಯದ ಸರಕಾರದ ಮೊದಲ ಕಂತು ತಿಂಗಳೊಳಗೆ ಪಾವತಿಗೆ ಕ್ರಮ

Pinterest LinkedIn Tumblr


ಬೆಂಗಳೂರು : ಕೇಂದ್ರ ಸರ್ಕಾರವು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ವಾರ್ಷಿಕ 6000 ರೂಪಾಯಿ ನೆರವು ನೀಡುವ ಯೋಜನೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು ಘೋಷಿಸಿರುವ 4000 ರೂಪಾಯಿ ನೆರವಿನ ಯೋಜನೆ ಜಾರಿಗೆ ಇನ್ನೆರಡು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಮೊದಲ ಕಂತಿನ 2000 ರೂಪಾಯಿಗಳನ್ನು 15 – 20 ದಿನಗಳೊಳಗೆ ರೈತರಿಗೆ ಪಾವತಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರ ಪರಿಸ್ಥಿತಿ:
ರಾಜ್ಯದಲ್ಲಿ ಈ ಬಾರಿಯೂ ಮಳೆಯ ತೀವ್ರ ಕೊರತೆ ಇದೆ. 2019ರ ಜನವರಿಯಿಂದ ಮೇ 31ರ ವರೆಗೆ ಪೂರ್ವ ಮುಂಗಾರು ಮಳೆಯಲ್ಲಿ ಸರಾಸರಿ ಶೇ. 42 ರಷ್ಟು ಕೊರತೆ ಇದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಎರಡು ವಾರ ತಡವಾಗಿದ್ದಲ್ಲದೆ, ಈವರೆಗೆ ವಾಡಿಕೆ ಮಳೆಗಿಂತ ಶೇ. 18ರಷ್ಟು ಮಳೆ ಕೊರತೆ ಇದೆ. ಜುಲೈ ತಿಂಗಳಲ್ಲಿಯೂ 3067ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಟ್ಯಾಂಕರ್ ಗಳ ಮೂಲಕ ಇಲ್ಲವೇ ಖಾಸಗಿ ಬೋರ್‍ ವೆಲ್ ಗಳಿಂದ ನೀರು ಪೂರೈಕೆಯಾಗುತ್ತಿರುವುದು ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ ಎಂದು ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.

ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ ಮತ್ತು ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವ ಮೂಲಕ ಜನ ವಲಸೆ ಹೋಗುವುದನ್ನು ತಡೆಗಟ್ಟಲು ಹಾಗೂ ಅಂತರ್ಜಲ ವೃದ್ಧಿ ಮತ್ತು ಜಲಸಂರಕ್ಷಣೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಈ ವರೆಗೆ 618.1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸುಮಾರು 422 ಕೋಟಿ ರೂಪಾಯಿ ಅನುದಾನ ಲಭ್ಯವಿದೆ. ಬರ ಪರಿಹಾರ ಮತ್ತಿತರ ತುರ್ತು ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜಾನುವಾರುಗಳಿಗೆ ನೀರು, ಮೇವಿನ ಲಭ್ಯತೆ, ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್ ಸ್ಥಾಪನೆ, ಗೋಶಾಲೆಗಳನ್ನು ತೆರೆಯುವುದು ಮೊದಲಾದ ಕ್ರಮಗಳನ್ನು ಅಗತ್ಯವನ್ನಾಧರಿಸಿ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Comments are closed.