ಬೆಂಗಳೂರು (ಜುಲೈ.07); ಮೈತ್ರಿ ಸರ್ಕಾರದ 13 ಜನ ಶಾಸಕರು ನಿನ್ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಸರ್ಕಾರದಲ್ಲಿ ಅತೃಪ್ತರ ಸಂಖ್ಯೆ ಇನ್ನೂ ಹೆಚ್ಚಿದ್ದು, ಸೋಮವಾರವೂ ಸುಮಾರು 10 ಜನ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಉಬಯ ಪಕ್ಷದ ರೆಬೆಲ್ಸ್ ಶಾಸಕರ ವಿರುದ್ಧ ತಮಿಳುನಾಡು ಮಾದರಿ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಶಾಸಕರ ಮನವೊಲಿಸಲು ಸಾಧ್ಯವಾಗದೆ ಇದ್ದರೆ, ಅಂತಿಮವಾಗಿ ಸರ್ಕಾರ ಉಳಿಸಿಕೊಳ್ಳಲು ತಮಿಳುನಾಡು ಮಾದರಿ ಬಾಣ ಪ್ರಯೋಗಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಏನದು ತಮಿಳುನಾಡು ಮಾದರಿ ಅಸ್ತ್ರ?:
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ಬೆಳವಣಿಗೆ ಇಡೀ ದೇಶದ ಗಮನ ಸೆಳೆದಿತ್ತು. ಆಡಳಿತರೂಢ ಎಐಎಡಿಎಂಕೆ ಪಕ್ಷ ಟಿಟಿವಿ ದಿನಕರನ್ ಎಂಬ ವ್ಯಕ್ತಿಯ ದೆಸೆಯಿಂದ ಒಡೆದು ಇಬ್ಭಾಗವಾಗಿತ್ತು. ಸರ್ಕಾರದ ಮೇಲೆ ನಮಗೆ ವಿಶ್ವಾಸ ಇಲ್ಲ ಎಂದು ಘೋಷಿಸಿದ್ದ 18 ಜನ ಶಾಸಕರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೊರ ನಡೆದಿದ್ದರು.
ಈ ಸಂದರ್ಭದಲ್ಲಿ ಆಡಳಿತರೂಢ ಪಕ್ಷ ವಿಧಾನ ಮಂಡಲದಲ್ಲಿ ಬಹುಮತದ ಕೊರತೆಯನ್ನು ಅನುಭವಿಸಿತ್ತು. ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಸ್ಪೀಕರ್ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ ಬದಲು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ 18 ಶಾಸಕರ ಶಾಸಕ ಸ್ಥಾನವನ್ನೇ ರದ್ದು ಮಾಡಿತ್ತು. ಇದನ್ನು ವಿರೋಧಿಸಿ ಶಾಸಕರು ನ್ಯಾಯಾಲಯ ಮೊರೆ ಹೋದರೂ ಸಹ ನ್ಯಾಯಾಲಯ ತನಗೆ ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ಘೋಷಿಸಿತ್ತು.
ಸ್ಪೀಕರ್ ಅವರ ಈ ನಿರ್ಧಾರದಿಂದ ವಿಧಾನಸಭೆಯ ಸರಳ ಬಹುಮತದ ಮ್ಯಾಜಿಕ್ ನಂಬರ್ ಇಳಿಕೆಯಾಗಿತ್ತು. ಪರಿಣಾಮ ವಿಧಾನಮಂಡಲದಲ್ಲಿ ಬಹುಮತ ಸಾಬೀತುಪಡಿಸಿದ ಎಐಎಡಿಎಂಕೆ ತನ್ನ ಸರ್ಕಾರವನ್ನು ಉಳಿಸಿಕೊಂಡಿತ್ತು. ಅಲ್ಲದೆ, ಈ 18 ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜೀನಾಮೆ ನೀಡಿದ್ದ 18 ಶಾಸಕರ ಪೈಕಿ 17 ಜನ ಸೋಲನುಭವಿಸಿದ್ದರು.
ಇದೇ ಮಾದರಿಯ ಅಸ್ತ್ರ ಪ್ರಯೋಗಿಸಿ ರಾಜ್ಯ ಸರ್ಕಾರವನ್ನೂ ಉಳಿಸಿಕೊಳ್ಳಲು ಮೈತ್ರಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದು ಸಾಧ್ಯವಾದರೆ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷ ಬಹುಮತ ಸಾಬೀತುಪಡಿಸಲು ಒತ್ತಾಯಿಸಿದರೂ ಮ್ಯಾಜಿಕ್ ನಂಬರ್ ಇಳಿಕೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಒಟ್ಟಾರೆ ಬಿಜೆಪಿ ಆಪರೇಷನ್ ಕಮಲಕ್ಕೆ ಖೆಡ್ಡಾ ತೋಡಿದರೆ ರಾಜೀನಾಮೆ ಕೊಟ್ಟ ರೆಬೆಲ್ಸ್ಗಳ ರಾಜಕೀಯ ಭವಿಷ್ಯವನ್ನೇ ಬಲಿ ಹಾಕಲು ಮೈತ್ರಿ ನಾಯಕರು ಮುಂದಾಗಿದ್ದಾರೆ. ಆದರೆ, ಅವರ ಈ ಯೋಜನೆಗೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸಹಕರಿಸುತ್ತಾರ? ರಾಜ್ಯ ಸರ್ಕಾರವನ್ನು ಉಳಿಸಲು ಕಾಂಗ್ರೆಸ್ ರೆಬೆಲ್ ಶಾಸಕರ ವಿರುದ್ಧ ತಮಿಳುನಾಡು ಮಾದರಿ ಪಕ್ಷಾಂತರ ಕಾಯ್ದೆಯನ್ನು ಪ್ರಯೋಗಿಸುತ್ತಾರ? ಎಂಬುದನ್ನು ಕಾದುನೋಡಬೇಕಿದೆ.
Comments are closed.