ಕರ್ನಾಟಕ

ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಅವರೇ ಮುಂದುವರೆಯುತ್ತಾರೆ; ಪ್ರಜ್ವಲ್​​ ರೇವಣ್ಣ

Pinterest LinkedIn Tumblr


ನವದೆಹಲಿ(ಜುಲೈ.03): ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಅವರೇ ಮುಂದುವರೆಯುತ್ತಾರೆ ಎಂದು ಹಾಸನ ಸಂಸದ ಪ್ರಜ್ವಲ್​​ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಇವರು, ಈಗಷ್ಟೇ ವಿಶ್ವನಾಥ್​​ ಅವರನ್ನು ಭೇಟಿ ಮಾಡಿ ರಾಜಕೀಯದ ಬಗ್ಗೆ ಚರ್ಚಿಸಿದ್ದೇನೆ. ಯಾವುದೇ ಕಾರಣಕ್ಕೂ ಅವರು ಪಕ್ಷ ತೊರೆಯುವುದಿಲ್ಲ. ನಮಗೆ ವಿಶ್ವನಾಥ್​​ ಅವರ ಮಾರ್ಗದರ್ಶನ ಬೇಕಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು, ಕಾಫಿ ಬೆಳೆಗಾರರ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿದ್ದರು. ಮುಂದಿನ ದಿನಗಳಲ್ಲಿ ನಾನು ಅವರ ಮಾರ್ಗದರ್ಶನದಲ್ಲೇ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

ಇತ್ತೀಚೆಗಷ್ಟೇ ಎಚ್​​. ವಿಶ್ವನಾಥ್​​ ಅವರು ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹೀನಾಯವಾಗಿ ಸೋತ ಕಾರಣಕ್ಕಾಗಿ ವಿಶ್ವನಾಥ್ ಪದತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಕಣಕ್ಕಿಳಿದಿದ್ದರೂ ಎರಡೂ ಪಕ್ಷಗಳು ತಲಾ ಒಂದೊಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಹೈಕಮಾಂಡ್​​ ಮಟ್ಟದಲ್ಲಿ ಮೈತ್ರಿ ಆಗಿದ್ದರೂ ಸ್ಥಳೀಯ ಕಾರ್ಯಕರ್ತರಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ನಡೆ ನುಡಿಗಳು, ಕಾರ್ಯವೈಖರಿ, ಉದ್ದೇಶಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ. ನಾವು ಬದಲಾಗಬೇಕಿದೆ. ಈ ಬದಲಾವಣೆಗಳು ನಮ್ಮಿಂದಲೇ ಆಗಬೇಕಾಗಿವೆ ಎಂದು ವಿಶ್ವನಾಥ್​ ತಿಳಿಸಿದ್ದಾರೆ.

ಇನ್ನು ಈಗ ನಾವು ಅಧಿಕಾರದಲ್ಲೇನೋ ಇದ್ದೇವೆ. ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಹಲವು ಬದಲಾವಣೆ ಆವಶ್ಯಕತೆ ಇದೆ. ತಪ್ಪುಗಳನ್ನು ತಿದ್ದಿಕೊಂಡು ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಇದನ್ನು ಮನಗಂಡು ಮೊದಲ ಹೆಜ್ಜೆಯಾಗಿ ನಾನು ಪಕ್ಷದ ರಾಜ್ಯಾಧ್ಯಕ್ಷ ಪದವಿಯಿಂದ ನಿರ್ಗಮಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ಧಾರೆ.

ಎಚ್​​. ವಿಶ್ವನಾಥ್​​ ರಾಜೀನಾಮೆ ಸುತ್ತ ಹಲವು ಅನುಮಾನಗಳು ಮೂಡಿವೆ. ಇದಕ್ಕೆ ಏನು ಕಾರಣ ಇರಬಹುದು ಎಂಬ ಕುತೂಹಲ ಜನರಲ್ಲಿದೆ.

Comments are closed.