ಕರ್ನಾಟಕ

ಕೈ ನಾಯಕರ ಉದ್ಧಟತನ ಸಹಿಸಲು ಸಾಧ್ಯವಿಲ್ಲ: ಬೇಗ್ ಅಮಾನತಿಗೆ ಸಮರ್ಥನೆ ನೀಡಿದ ಕೃಷ್ಣಭೈರೇಗೌಡ

Pinterest LinkedIn Tumblr

ಶಿವಮೊಗ್ಗ: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೆಗೌಡ ಅವರು ಅಸಮಧಾನ ಹೊರಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕ ರೋಷನ್ ಬೇಗ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂತಾದವರು ಸರ್ಕಾರದ ಬಗ್ಗೆ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಅವರ ಆರೋಪಗಳು ನಿರಾಧಾರವಾಗಿದೆ. ಅವರ ಕೀಳುಮಟ್ಟದ ವರ್ತನೆ, ನಡೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದ್ದು, ಕಾಂಗ್ರೆಸ್ಸಿನ ಈ ನಿರ್ಧಾರವನ್ನು ಕೃಷ್ಣಭೈರೇಗೌಡ ಅವರು ಸಮರ್ಥಿಸಿಕೊಂಡರು. ಅವರೊಬ್ಬ ಅವಕಾಶವಾದಿ ರಾಜಕಾರಣಿ. ಅವರನ್ನ ಮಂತ್ರಿ ಮಾಡಿದರೆ ಎಲ್ಲವೂ ಸರಿ ಇರುತ್ತಿತ್ತು. ಮಂತ್ರಿ ಮಾಡದೇ ಇರುವುದರಿಂದ ಬೇಗ್ ಈ ರೀತಿ ಹೇಳಿಕೆ ನೀಡಿದ್ದಾರೆ. ಇದು ಪಕ್ಷಕ್ಕೆ ಶೋಭೆ ತರುವುದಿಲ್ಲ. ಭಿನ್ನಾಭಿಪ್ರಾಯಗಳು ಸಹಜವಾಗಿದ್ದು ಅವನ್ನು ಪಕ್ಷದೊಳಗೆ ಸರಿಪಡಿಸಿಕೊಳ್ಳಬೇಕು. ಬೀದಿಯಲ್ಲಿ ನಿಂತು ಮಾತನಾಡುವುದಲ್ಲ. ಅವರ ವಿರುದ್ಧದ ಶಿಸ್ತಿನ ಕ್ರಮ ಸರಿಯಾಗಿದೆ ಎಂದರು.

ಐಎಂಎ ಬಹುಕೋಟಿ ಹಗರಣ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಸರಿಯಾದ ತನಿಖೆ ಆಗಬೇಕು. ಇದೇ ಮೊದಲ ಹಗರಣವಲ್ಲ. ಈ ಹಿಂದೆ ವಿನಿವಿಂಕ್ ಶಾಸ್ತ್ರಿ ಕಂಪನಿ ಇದೆ ರೀತಿ ಜನರಿಗೆ ಮೋಸ ಮಾಡಿತ್ತು. ಈ ರೀತಿಯ ಹಗರಣಗಳು ಆದಾಗ, ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಕೆಲವು ಗೊಂದಲಗಳು ಇವೆ. ಹೀಗಾಗಿ ಕಾನೂನಿಗೆ ತಿದ್ದುಪಡಿ ತರಬೇಕು. ಮುಂದಿನ ಅಧಿವೇಶನದಲ್ಲಿ ಕಾನೂನು ಸಚಿವರು, ತಿದ್ದುಪಡಿ ತರುವುದಾಗಿ ಹೇಳಿದ್ದಾರೆ ಎಂದು ಕೃಷ್ಣಭೈರೇಗೌಡ ಅವರು ತಿಳಿಸಿದರು.

Comments are closed.